ಅಳವಂಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಯುವನಿಧಿ ಮಾಹಿತಿ ಕಾರ್ಯಕ್ರಮದಲ್ಲಿ ಭಿತ್ತಿಪತ್ರ ಪ್ರದರ್ಶಿಸಲಾಯಿತು. ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸದಸ್ಯ ಅನ್ವರ ಗಡಾದ, ಪ್ರಾಚಾರ್ಯ ಜಗದೀಶ ಆಲದಕಟ್ಟಿ, ವಿಜಯಕುಮಾರ, ಹನುಮೇಶ ತೊಂಡಿಹಾಳ, ದುರ್ಗಾ, ಅಶ್ವಿನಿ ಇತರರಿದ್ದರು. 
ಜಿಲ್ಲೆ

ನಿರುದ್ಯೋಗಿಗಳ ಬದುಕಿಗೆ ಯುವನಿಧಿ ಪೂರಕ

ಶ್ರೀನಾಥ

ಅಳವಂಡಿ: ಯುವ ಜನರು ಬದುಕನ್ನು ಕಟ್ಟಿಕೊಳ್ಳಲು ಸರ್ಕಾರದ ಗ್ಯಾರಂಟಿ ಯೋಜನೆ ಯುವನಿಧಿ ಸಹಕಾರಿಯಾಗಿದೆ ಎಂದು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸದಸ್ಯ ಅನ್ವರ ಗಡಾದ ಹೇಳಿದರು.

ಗ್ರಾಮದ ಶ್ರೀ ಶಿವಮೂರ್ತಿಸ್ವಾಮಿ ಇನಾಮದಾರ ಕಟ್ಟಿಮನಿ ಹಿರೇಮಠ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೌಶಲಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಯುವನಿಧಿ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಯುವನಿಧಿ ಯೋಜನೆ 2023-24 ರಲ್ಲಿ ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ ಪಡೆದವರು ನಂತರ ಕನಿಷ್ಟ ಆರು ತಿಂಗಳುಗಳ ಕಾಲ ಸರ್ಕಾರಿ, ಖಾಸಗಿ ಉದ್ಯೋಗಿ ಆಗಿರದಿದ್ದರೆ ಈ ಯೋಜನೆಯ ಉಪಯೋಗ ಪಡೆದುಕೊಳ್ಳಬೇಕು ಎಂದರು.

ಉದ್ಯೋಗ ಅಭಿವೃದ್ಧಿ ನಿರ್ವಾಹಕ ಹನುಮೇಶ ತೊಂಡಿಹಾಳ ಮಾತನಾಡಿ, ಪದವಿ ನಂತರ ಉದ್ಯೋಗ ಮುಂದುವರಿಸದೆ ಇರುವವರು ಹಾಗೂ ಸ್ವಯಂ ಉದ್ಯೋಗ ಮಾಡದವರು, ರಾಜ್ಯದಲ್ಲಿ ವಾಸವಿರುವವರು ಕನಿಷ್ಟ 6 ವರ್ಷಗಳವರೆಗೆ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾವರೆಗೆ ಅಧ್ಯಯನ ಮಾಡಿದವರು ಯುವನಿಧಿ ಪಡೆಯಲು ಅರ್ಹರಾಗಿದ್ದಾರೆ ಎಂದರು.

ಆಪ್ತ ಸಮಾಲೋಚಕಿ ದುರ್ಗಾ ಶ್ಯಾನಬೋಗರ ಮಾತನಾಡಿ, ಯುವನಿಧಿಗೆ ನೋಂದಾಯಿಸಿಕೊಳ್ಳಲು ಸೇವಾಸಿಂಧು ಪೋರ್ಟಲ್‌ನಲ್ಲಿ ದಾಖಲಿಸಬೇಕು. ಪದವಿ ಹಾಗೂ ಸ್ನಾತಕೋತ್ತರ ಪದವಿಧರರು ಪ್ರತಿ ತಿಂಗಳು 3000 ರೂ. ಹಾಗೂ ಡಿಪ್ಲೊಮಾ ಮುಗಿಸಿದವರು ಪ್ರತಿ ತಿಂಗಳು 1500 ರೂ. ಸಹಾಯಧನ ಪಡೆಯಲಿದ್ದಾರೆ. ಯುವನಿಧಿಗೆ ಅರ್ಹರಾಗಲು ಯಾವುದೇ ಉದ್ಯೋಗದಲ್ಲಿರಬಾರದು ಎಂದರು.

ಪ್ರಾಚಾರ್ಯ ಜಗದೀಶ ಆಲದಕಟ್ಟಿ ಮಾತನಾಡಿದರು. ಡಿಇಒ ಅಶ್ವಿನಿ ಹೊಸಮನಿ ಹಾಗೂ ಉಪನ್ಯಾಸಕರು ಹಾಜರಿದ್ದರು.