ಅಳವಂಡಿ: ಗ್ರಾಮದ ಗ್ರಾಪಂ ಸಭಾಭವನದಲ್ಲಿ ಗುರುವಾರ ಸಾಮಾನ್ಯ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಂಕ್ರಮ್ಮ ಜೋಗಿನ ಅಧ್ಯಕ್ಷತೆಯಲ್ಲಿ ನಡೆಯಿತು.
ಪಿಡಿಒ ಕೊಟ್ರಪ್ಪ ಅಂಗಡಿ ಮಾತನಾಡಿ, ಗ್ರಾಮದ ಸಂತೆ ಹರಾಜು ಹಾಗೂ ಹಳೆಯ ವಾಣಿಜ್ಯ ಮಳಿಗೆಯ ಬಾಡಿಗೆ ಅವಧಿ ಮಾರ್ಚ್ ತಿಂಗಳಲ್ಲಿ ಕೊನೆಗೊಳ್ಳಲಿದೆ. ಕಾರಣ ಅವುಗಳ ಮರು ಹರಾಜು ಪ್ರಕ್ರಿಯೆಯನ್ನು ಮಾ.15 ರೊಳಗೆ ಮುಗಿಸಬೇಕಿದೆ ಎಂದು ಮಾಹಿತಿ ನೀಡಿದರು.
ಹಂದ್ರಾಳ ರಸ್ತೆಯಲ್ಲಿನ ಕೆರೆಯ ನೀರು ಮಲೀನಗೊಳ್ಳದಂತೆ ನೋಡಿಕೊಳ್ಳುವ ಸಲುವಾಗಿ ಕಾವಲುಗಾರನನ್ನು ನೇಮಿಸುವ ಹಾಗೂ ಬೇಸಿಗೆ ಆರಂಭವಾಗಿರುವುದರಿಂದ ಗ್ರಾಮದಲ್ಲಿನ ಮುಖ್ಯ ರಸ್ತೆಗೆ ದಿನಕ್ಕೆ ಎರಡು ಬಾರಿ ನೀರು ಹಾಗೂ ಬಸ್ ನಿಲ್ದಾಣದಿಂದ ನಿಲೋಗಿಪುರ ರಸ್ತೆಯಲ್ಲಿ ಜನಸಂದಣಿ ಪ್ರದೇಶದವರೆಗೂ ನೀರು ಸಿಂಪಡಣೆಗೆ ಸಭೆ ಅನುಮತಿ ನೀಡಿತು.
ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ, ಸಿಪಿಎಸ್ ಶಾಲೆಯ ಶೌಚಗೃಹ ಪೂರ್ಣಗೊಳಿಸುವುದು, ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಕುರಿತು ಚರ್ಚಿಸಲಾಯಿತು. ನೀರು ಪೂರೈಕೆ ಮತ್ತು ಬೇಸಿಗೆಯಲ್ಲಿ ವಿದ್ಯುತ್ ಕೈಕೊಡುವುದರಿಂದ ಗ್ರಾಪಂ ಕಚೇರಿಗೆ ಹೆಚ್ಚುವರಿ ಎರಡು ಬ್ಯಾಟರಿ ಖರೀದಿಗೆ ಒಪ್ಪಿಗೆ ಸೂಚಿಸಲಾಯಿತು.
ಗ್ರಾಪಂ ಉಪಾಧ್ಯಕ್ಷೆ ಶಾರಮ್ಮ ಇಳಿಗೇರ, ಸದಸ್ಯರಾದ ಗುರುಬಸವರಾಜ ಹಳ್ಳಿಕೇರಿ, ಅನ್ವರ ಗಡಾದ, ಹನುಮಂತ ಮೋರನಾಳ, ಗವಿಸಿದ್ದಪ್ಪ ಭಜಂತ್ರಿ, ಹನುಮಂತ ಮೂಲಿಮನಿ, ರೇಣುಕಪ್ಪ ಹಳ್ಳಿಕೇರಿ, ವಿಶ್ವನಾಥ ದೋತರಗಾವಿ, ಸುವರ್ಣ ಅರಳೆಲೆಮಠ, ಭಾರತಿ ಬೆಣಕಲ್, ಹನುಮವ್ವ, ರೇಣುಕಾರಡ್ಡಿ, ರಾಜೀವಗಾಂಧಿ ಪಂಚಾಯತ್‌ರಾಜ್ ಫೆಲೋ ಸೌಜನ್ಯ, ಸಿಬ್ಬಂದಿ ಶಿವಮೂರ್ತಿ, ದೇವೆಂದ್ರರಡ್ಡಿ, ಹನುಮಪ್ಪ ಇತರರು ಇದ್ದರು.