ಅಳವಂಡಿ ಗ್ರಾಪಂನಲ್ಲಿ ಅಧ್ಯಕ್ಷೆ ಶಂಕ್ರಮ್ಮ ಜೋಗಿನ 2025-26ನೇ ಸಾಲಿನ ಬಜೆಟ್ ಮಂಡಿಸಿದರು. ಪಿಡಿಒ ಕೊಟ್ರಪ್ಪ, ಉಪಾಧ್ಯಕ್ಷೆ ಶಾರಮ್ಮ, ಕಾರ್ಯದರ್ಶಿ ಬಸವರಾಜ, ಸೌಜನ್ಯಾ ಇತರರಿದ್ದರು.  
ಜಿಲ್ಲೆ

ಶಿಗ್ಗಾಂವ-ಕಲ್ಮಲಾ ರಾಜ್ಯ ಹೆದ್ದಾರಿ ವಿಸ್ತರಣೆಗೆ ಅನುಮೋದನೆ

ಕುರುವತ್ತಿ ಶ್ರೀಕಾಂತಪ್ಪ

ಅಳವಂಡಿ: ಇಲ್ಲಿನ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ 2025-26ನೇ ಸಾಲಿನ ಆಯ-ವ್ಯಯ ಮಂಡನೆ ಹಾಗೂ ಸಾಮಾನ್ಯ ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.

ಬಜೆಟ್ ಮಂಡಿಸಿದ ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ, 2025-26ನೇ ಸಾಲಿನ ಆರಂಭ ಶಿಲ್ಕು, ಅನುದಾನ, ಕರವಸೂಲಿ, 15ನೇ ಹಣಕಾಸು, ನರೇಗಾ, ಸ್ವಚ್ಛ ಭಾರತ, ಎಸ್ಕ್ರೋ ಖಾತೆ, ಕೂಸಿನ ಮನೆ ಅನುದಾನ, ಗೌರವಧನ ಇತರ ಮೂಲಗಳಿಂದ ಒಟ್ಟು 2.60 ಕೋಟಿ ರೂ. ಆದಾಯ ನೀರಿಕ್ಷಿಸಲಾಗಿದ್ದು. ಸಾಮಾನ್ಯ ಆಡಳಿತ, ನರೇಗಾ ಯೋಜನೆ, ನೀರು ಸರಬರಾಜು, ಗೌರವಧನ ಪಾವತಿ, ಘನತ್ಯಾಜ್ಯ ವಿಲೇವಾರಿ, ಕಾಮಗಾರಿ ವೆಚ್ಚ, 15ನೇ ಹಣಕಾಸು ಯೋಜನೆ, ಬೀದಿ ದೀಪ ನಿರ್ವಹಣೆ ಇತರ ಕಾರ್ಯಗಳಿಗೆ ವೆಚ್ಚ ಮಾಡಲಾಗುವುದು ಎಂದು ತಿಳಿಸಿದರು.

ಗ್ರಾಮದ ಮಧ್ಯ ಭಾಗದಲ್ಲಿ ಹಾದು ಹೋಗಿರುವ ಶಿಗ್ಗಾಂವ-ಕಲ್ಮಲಾ ರಾಜ್ಯ ಹೆದ್ದಾರಿ 80 ಅಡಿ ವಿಸ್ತರಣೆಗೆ ಸಭೆ ಅನುಮೋದನೆ ನೀಡಿತು. ಇದರಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ, ಫುಟ್‌ಪಾತ್, ಡಿವೈಡರ್ ಇರಲಿದೆ. ಗ್ರಾಮಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಪೂರೈಸುವ ನೀರು ಕುಡಿಯಲು ಯೋಗ್ಯವಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದ್ದರಿಂದ ನೀರನ್ನು ಕುಡಿಯಲು ಬಳಸದಂತೆ ಡಂಗೂರ ಸಾರಲು ತೀರ್ಮಾಣ ಕೈಗೊಳ್ಳಲಾಯಿತು. ಬೇಸಿಗೆ ಪ್ರಾರಂಭವಾಗಿದ್ದರಿಂದ ನೀರಿನ ಕೊರತೆಯಾಗದಂತೆ ಹಾಗೂ ಶುದ್ಧ ಕುಡಿವ ನೀರಿನ ಘಟಕ ಸದಾ ಚಾಲ್ತಿ ಇರುವಂತೆ ನೋಡಿಕೊಳ್ಳಲು ಸಂಬಂಧಿಸಿದವರಿಗೆ ಸೂಚಿಸಲಾಯಿತು.

ಚರಂಡಿ ಸ್ವಚ್ಛತೆ, ಬಾಂದವ್ಯ ಒಕ್ಕೂಟದ ಕಾಮನ್‌ವರ್ಕ್ ಶೆಡ್ ಕಟ್ಟಡ ಸುತ್ತ ಆವರಣ ಗೋಡೆ ನಿರ್ಮಾಣ ಸೇರಿ ವಿವಿಧ ವಿಷಯ ಕುರಿತು ಚರ್ಚೆ ನಡೆಸಲಾಯಿತು.

ರಾಜೀವ್‌ಗಾಂಧಿ ಪಂಚಾಯತ್‌ರಾಜ್ ಫೆಲೋ ಸೌಜನ್ಯಾ, ಉಪಾಧ್ಯಕ್ಷೆ ಶಾರಮ್ಮ ಇಳಿಗೇರ, ಸದಸ್ಯರಾದ ಗುರುಬಸವರಾಜ ಹಳ್ಳಿಕೇರಿ, ಅನ್ವರ ಗಡಾದ, ನಾಗರಾಜ ನವನಳ್ಳಿ, ರೇಣುಕಪ್ಪ ಹಳ್ಳಿಕೇರಿ, ಹನುಮಂತ ಮೂಲಿಮನಿ, ಹನುಮಂತ ಮೋರನಾಳ, ವಿಶ್ವನಾಥ ದೋತರಗಾವಿ, ಶಶಿಕಲಾ ನಾಗರಳ್ಳಿ, ಲಕ್ಷ್ಮವ್ವ, ಪ್ರಶಾಂತಗೌಡ ಪಾಟೀಲ, ಗವಿಸಿದ್ದಪ್ಪ ಭಜಂತ್ರಿ, ಮಂಜುನಾಥ ಬೆದವಟ್ಟಿ, ರೇಣುಕಾ ರಡ್ಡಿ, ಕಾರ್ಯದರ್ಶಿ ಬಸವರಾಜ, ಸಿಬ್ಬಂದಿಗಳಾದ ಶಿವಮೂರ್ತಿ, ದೇವೇಂದ್ರರಡ್ಡಿ ಇತರರಿದ್ದರು.