ಅಳವಂಡಿ: ರಂಗಭೂಮಿ ಕಲೆಗಳ ಪ್ರದರ್ಶನ ಸಮಾಜದಲ್ಲಿ ನಡೆಯುವ ಅಂಕುಡೊಂಕುಗಳನ್ನು ತಿದ್ದುವಲ್ಲಿ ಸಹಕಾರಿಯಾಗಿವೆ ಎಂದು ರಾಬಕೊವಿ ನಿರ್ದೇಶಕ ಕೃಷ್ಣರಡ್ಡಿ ಗಲಬಿ ತಿಳಿಸಿದರು.
ಸಮೀಪದ ನೀರಲಗಿ ಗ್ರಾಮದಲ್ಲಿ ಶ್ರೀ ಅನ್ನದಾನೇಶ್ವರ ಯುವ ನಾಟ್ಯ ಸಂಘ ಪ್ರದರ್ಶಿಸಿದ ‘ಹೆಡೆ ಎತ್ತಿದ ಸರ್ಪಕ್ಕೆ ಗುರಿಯಿಟ್ಟ ಗರುಡ’ ಅರ್ಥಾತ್ ಧರ್ಮದ ಕಣ್ಣಿರು ಎಂಬ ಸಾಮಾಜಿಕ ನಾಟಕಕ್ಕೆ ಚಾಲನೆ ನೀಡಿ ಗುರುವಾರ ಮಾತನಾಡಿದರು.
ಜನರಲ್ಲಿ ಬಾಂಧವ್ಯ ಗಟ್ಟಿಗೊಳಿಸುವಲ್ಲಿ ನಾಟಕಗಳು ಸಹಕಾರಿಯಾಗಿವೆ. ಯುವ ಜನತೆ ರಂಗಭೂಮಿ ಕಲೆ ಬಗ್ಗೆ ಆಸಕ್ತಿ ವಹಿಸಬೇಕು. ಸಾಹಿತ್ಯ, ಸಂಸ್ಕೃತಿ, ರಂಗಭೂಮಿ ಕಲೆ ಗ್ರಾಮೀಣ ಭಾಗದಲ್ಲಿ ಈಗಲೂ ಜೀವಂತವಾಗಿದೆ. ನಾಟಕಗಳ ಪ್ರದರ್ಶನಕ್ಕೆ ತಿಂಗಳುಗಟ್ಟಲೇ ಶ್ರಮ ಇದೆ. ಕಾರಣ ಇಂತಹ ಕಲೆಯನ್ನು ಎಲ್ಲರೂ ಪ್ರೋತ್ಸಾಹಿಸಬೇಕು ಎಂದರು.
ಪ್ರಮುಖರಾದ ಭರಮಪ್ಪ ನಗರ, ವೆಂಕಟೇಶ ವಾಲ್ಮೀಕಿ, ಪ್ರಕಾಶ ಆನಂದಳ್ಳಿ, ಪಾಲಪ್ಪ, ಶಂಕರಗೌಡ ದಳಪತಿ, ಸಣ್ಣಬಸನಗೌಡ, ಸಂಗಪ್ಪ ಯಲ್ಲಮ್ಮನವರ, ನಿಂಗಪ್ಪ, ಮಾರುತಿ, ಚನ್ನಬಸಪ್ಪ ಡೊಳ್ಳಿನ, ಶಿವರಾಯಪ್ಪ, ಬಸವರಾಜ ಕತ್ತಿ, ಸಿದ್ದು ಬಾಸಿಂಗದಾರ ಇತರರಿದ್ದರು.