ಅಳವಂಡಿ: ಗ್ರಾಮದ ಬಾಂಧವ್ಯ ಸಂಜೀವಿನಿ ಒಕ್ಕೂಟದ ಕಚೇರಿಯಲ್ಲಿ ಕೃಷಿ ಹಾಗೂ ಕಂದಾಯ ಇಲಾಖೆಯಿಂದ ಬೆಳೆ ಸಮೀಕ್ಷೆದಾರರಿಗೆ ಮಾಹಿತಿ ಸಭೆ ನಡೆಯಿತು.
ಕೃಷಿ ಅಧಿಕಾರಿ ಪ್ರತಾಪಗೌಡ ನಂದನಗೌಡ್ರ ಮಾತನಾಡಿ, ಬೆಳೆ ಸಮೀಕ್ಷೆದಾರರು ರೈತರ ಮೊಬೈಲನಲ್ಲಿ ಬೆಳೆ ಸಮೀಕ್ಷೆ ಆ್ಯಪ್ ಡೌನಲೋಡ ಮಾಡಲು ತಿಳಿಸಬೇಕು. ಅವರ ಜಮೀನಿನಲ್ಲಿಯ ಬೆಳೆಯನ್ನು ಸಮೀಕ್ಷೆ ಮಾಡುವ ಬಗ್ಗೆ ಮಾಹಿತಿ ನೀಡಬೇಕು. ಸಮೀಕ್ಷೆ ಮಾಡುವುದರಿಂದ ಬೆಳೆ ಸಾಲ, ಸರ್ಕಾರದ ಬೆಂಬಲ ಬೆಲೆ ಯೋಜನೆ, ಬೆಳೆವಿಮೆ, ಪಹಣಿಯಲ್ಲಿ ಬೆಳೆಯನ್ನು ನೊಂದಾಯಿಸಲು ಸಹಕಾರಿಯಾಗಲಿದೆ ಎಂದರು.
ಕಂದಾಯ ನೀರಿಕ್ಷಕ ಸುರೇಶ ಹಂದ್ರಾಳ ಮಾತನಾಡಿ, ನಿಗದಿತ ಸಮಯದಲ್ಲಿ ಬೆಳೆ ಸಮೀಕ್ಷೆ ಕಾರ್ಯ ಮುಗಿಸಬೇಕು. ಈ ಬಗ್ಗೆ ಗ್ರಾಮ ಆಡಳಿತ ಅಧಿಕಾರಿಗಳು, ಖಾಸಗಿ ಬೆಳೆ ಸಮೀಕ್ಷೆದಾರರು ಜಾಗೃತಿ ಮೂಡಿಸಬೇಕು ಎಂದರು. ನಂತರ ಖಾಸಗಿ ಬೆಳೆ ಸಮೀಕ್ಷೆದಾರರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಕೃಷಿ ಅಧಿಕಾರಿ ಬಿ.ಎಮ್.ಗೊಬ್ಬರಗುಂಪಿ, ಗ್ರಾಮ ಆಡಳಿತ ಅಧಿಕಾರಿಗಳಾದ ಮಲ್ಲಮ್ಮ, ಶಿಲ್ಪಾ, ಸುಪ್ರಿತಾ, ಶ್ವೇತಾ, ಕರಿಬಸಮ್ಮ, ವಿಷ್ಣು ನಾಯಕ, ಯಮನೂರ, ಸಿದ್ದೇಶ ಇತರರಿದ್ದರು.