ಶೃಂಗೇರಿ: ಬೇಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿ ಆಲನ್.ಕೆ ರಾಷ್ಟ್ರಮಟ್ಟದ ಯುವ ವಿಜ್ಞಾನಿ ಇನ್‌ಸ್ೈಯರ್ ಆವಾರ್ಡ್ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ.
ತಾಲೂಕು,ಜಿಲ್ಲಾ, ರಾಜ್ಯಮಟ್ಟದಲ್ಲೂ ನಡೆದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದ , ಕೆ.ಆಲನ್ ಕರೊನಾ ಕಾರಣದಿಂದ ಎರಡು ವರ್ಷ ರಾಷ್ಟ್ರಮಟ್ಟದ ಯುವ ವಿಜ್ಞಾನಿ ಇನ್ಸ್‌ಫೈಯರ್ ಆವಾರ್ಡ್ ಸ್ಪರ್ಧೆಗೆ ತೆರಳಲು ಸಾಧ್ಯವಾಗಿರಲಿಲ್ಲ. ಸೆ.19ರಂದು ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಯುವ ವಿಜ್ಞಾನಿ ಇನ್‌ಸ್ೈಯರ್ ಆವಾರ್ಡ್ ಸ್ಫರ್ಧೆಯಲ್ಲಿ ತಾನು ತಯಾರಿಸಿದ ಛತ್ರಿಯ ವಿಸ್ಮಯತೆ ಪ್ರದರ್ಶಿಸಲಿದ್ದಾನೆ.
ಚಿಕ್ಕಂದಿನಿಂದಲೂ ಸಂಶೋಧನಾ ಪ್ರವೃತ್ತಿ ಬೆಳೆಸಿಕೊಂಡಿರುವ ಕೆ.ಆಲನ್ ತನ್ನ ಸೃಜನಾತ್ಮಕ ಚಿಂತನೆಯಿಂದ ಪುಟ್ಟದಾದ ಚಾರ್ಜರ್ ಬಳಸಿ ಮಳೆ ಬಂದ ಸಂದರ್ಭದಲ್ಲಿ ಬ್ಯಾಗಿನೊಳಗೆ ಮಡಚಿದ ಛತ್ರಿ ತನ್ನಿಂದ ತಾನೇ ನಿಧಾನವಾಗಿ ತೆರೆದುಕೊಂಡು ಮಳೆಯಿಂದ ರಕ್ಷಣೆ ನೀಡುವ ಸಂಶೋಧನೆ ಮಾಡಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ.
ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗೆ ತಾಯಿ ಶೈಮಾ, ಜೆಸಿಬಿಎಂ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ಅಕ್ಕ ಮಿನು, ಶಿಕ್ಷಕರಾದ ಸುರೇಶ್, ಶಶಿಕುಮಾರ್ ಅವರ ಪ್ರೋತ್ಸಾಹದಿಂದ ಸಂಶೋಧನೆ ಮಾಡಲು ಸಾಧ್ಯವಾಗಿದೆ. ಆಲನ್‌ಗೆ ಸಂಶೋಧನೆ ಜತೆಗೆ ಅದ್ಭುತವಾಗಿ ಚಿತ್ರಕಲೆ ಬಿಡಿಸುವ ಹವ್ಯಾಸವಿದೆ. ಇತ್ತೀಚೆಗೆ ತಾಲೂಕು ಮಟ್ಟದ ಜಾವಲಿಂಗ್ ಥ್ರೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ. ಭವಿಷ್ಯದಲ್ಲಿ ವಿಜ್ಞಾನಿಯಾಗ ಬೇಕು ಎಂಬ ಕನಸನ್ನು ಹೊತ್ತಿರುವ ಆಲನ್.ಕೆ ಬಡತನದಲ್ಲಿ ಅರಳಿದ ಗ್ರಾಮೀಣ ಭಾಗದ ಅದ್ಭುತ ಪ್ರತಿಭೆಯಾಗಿದ್ದಾನೆ.