ಜಿಲ್ಲೆ

ಸಿದ್ಧವಾಗುತ್ತಿದೆ ಆಲಂಪುರಿ ವೃಕ್ಷೋದ್ಯಾನ

ಸಂದೀಪ್ ಸಾಲ್ಯಾನ್ ಬಂಟ್ವಾಳ

ತಾಲೂಕಿನ ಕಾವಳಪಡೂರು ಗ್ರಾಮದ ವಗ್ಗ ಬಳಿಯ ಆಲಂಪುರಿಯಲ್ಲಿ ಅರಣ್ಯ ಇಲಾಖೆ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ವೃಕ್ಷೋದ್ಯಾನ ಲೋಕಾರ್ಪಣೆಗೆ ಸಿದ್ಧಗೊಳ್ಳುತ್ತಿದೆ.

ಉದ್ಯಾನವನ ನಿರ್ಮಾಣದ ಭಾಗಶಃ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದೆ. ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಉದ್ಘಾಟನೆಗೊಳ್ಳುವ ನಿರೀಕ್ಷೆ ಇದೆ. ವೃಕ್ಷೋದ್ಯಾನಕ್ಕೆ ತಾಗಿಕೊಂಡೇ ಬಿ.ಸಿ.ರೋಡು ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಯೂ ಅಭಿವೃದ್ಧಿಗೊಳ್ಳುತ್ತಿರುವುದರಿಂದ ಇದು ಸಾರ್ವಜನಿಕರ ಗಮನ ಸೆಳೆಯುತ್ತಿದೆ. ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ಬಂಟ್ವಾಳ ತಾಲೂಕಿನಲ್ಲಿ ಅರಣ್ಯ ಇಲಾಖೆ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಎರಡನೇ ಟ್ರೀ ಪಾರ್ಕ್ ಇದು. ಕೊಡ್ಯಮಲೆ ಅರಣ್ಯ ತಪ್ಪಲಿನಡಿ ಇರುವ ಈ ಟ್ರೀಪಾರ್ಕ್ ಬಂಟ್ವಾಳದಿಂದ ಧರ್ಮಸ್ಥಳ ಕ್ಷೇತ್ರಕ್ಕೆ ಸಾಗುವ ದಾರಿ ಮಧ್ಯೆ ಕಾಣುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಲಿದೆ.

ಟ್ರೀಪಾರ್ಕ್ ನಿರ್ಮಾಣಗೊಂಡಿರುವ ಜಮೀನು ಕಂದಾಯ ಇಲಾಖೆಗೆ ಒಳಪಟ್ಟಿತ್ತು. ಸಾಕಷ್ಟು ಮರಗಳನ್ನು ಹೊಂದಿರುವ ವಿಶಾಲ ಜಮೀನು ಉದ್ಯಾನ ನಿರ್ಮಾಣಕ್ಕೆ ಉತ್ತಮ ಎಂದುಕೊಂಡರೂ ಈ ಜಮೀನು ಕಂದಾಯ ಇಲಾಖೆಗೆ ಸೇರಿತ್ತು. ವಿಶೇಷ ಪ್ರಯತ್ನದ ಮೂಲಕ ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಗೆ ಭೂ ಪರಿವರ್ತಿಸಿ ಉದ್ಯಾನ ನಿರ್ಮಾಣಗೊಳಿಸಲಾಗುತ್ತಿದೆ.

82.30 ಲಕ್ಷ ರೂ. ವೆಚ್ಚ: ಆಲಂಪುರಿಯ ಟ್ರೀಪಾರ್ಕ್ ಮಾಜಿ ಸಚಿವ ಬಿ.ರಮಾನಾಥ ರೈಯವರ ಕನಸಿನ ಯೋಜನೆ. ಅವರು ಅರಣ್ಯ ಸಚಿವರಾಗಿದ್ದ ಸಂದರ್ಭ ಇಲ್ಲಿನ 23.85 ಎಕರೆ ವಿಸ್ತೀರ್ಣದ ಪ್ರಕೃತಿ ರಮಣೀಯ ಸ್ಥಳವನ್ನು ವೃಕ್ಷೋದ್ಯಾನವಾಗಿ ಅಭಿವೃದ್ಧಿಪಡಿಸುವ ಯೋಜನೆ ಕೈಗೊಂಡಿದ್ದರು. 2017-18ರಲ್ಲಿ 25 ಲಕ್ಷ ರೂಪಾಯಿ ಅನುದಾನ, 2018-19ರಲ್ಲಿ 19 ಲಕ್ಷ ರೂಪಾಯಿ ಅನುದಾನ ಇದಕ್ಕೆ ಮಂಜೂರಾಗಿತ್ತು. ಬಂಟ್ವಾಳ ಶಾಸಕ ರಾಜೇಶ್ ನಾಕ್ ಹೆಚ್ಚುವರಿ ಅನುದಾನ ಒದಗಿಸಿದ್ದಾರೆ. 2019-20ನೇ ಸಾಲಿನಲ್ಲಿ ಹೆಚ್ಚುವರಿಯಾಗಿ 38.30 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಈಗ ಒಟ್ಟು 82.30 ಲಕ್ಷ ರೂಪಾಯಿ ವೆಚ್ಚದಲ್ಲಿ ಟ್ರೀಪಾರ್ಕ್ ನಿರ್ಮಾಣಗೊಳ್ಲುತ್ತಿದ್ದು ಇನ್ನಷ್ಟು ಅಭಿವೃದ್ಧಿಗಾಗಿ ಮುಂದಿನ ದಿನಗಳಲ್ಲಿ ಮತ್ತೆ ಅನುದಾನ ಸಿಗುವ ನಿರೀಕ್ಷೆ ಇದೆ. ಪಾರ್ಕಿನ ನಿರ್ವಹಣೆ ದೃಷ್ಟಿಯಿಂದ ಸಾರ್ವಜನಿಕರಿಂದ ಪ್ರವೇಶ ಶುಲ್ಕ ಸಂಗ್ರಹಿಸುವ ಬಗ್ಗೆ ತೀರ್ಮಾನಿಸಲಾಗಿದೆ.

ಪಾರ್ಕಿನಲ್ಲಿ ಏನೇನಿದೆ?: ಆರಂಭದ 25 ಲಕ್ಷ ರೂಪಾಯಿ ಅನುದಾನದಲ್ಲಿ ಪ್ರದೇಶ ಸ್ವಚ್ಛತಾ ಕಾರ್ಯ, ತಂತಿ ಬೇಲಿ ನಿರ್ಮಾಣ, ಕೊಳವೆಬಾವಿ ಅಳವಡಿಕೆ ಮೊದಲಾದ ಆರಂಭಿಕ ಹಂತದ ಕೆಲಸಗಳು ನಡೆದಿವೆ. ಉಳಿದ ಅನುದಾನದಲ್ಲಿ ಈಗ ಆನೆಯ ದಂತದ ಮಾದರಿಯ ಪ್ರವೇಶ ದ್ವಾರ, ಟ್ರೀಪಾರ್ಕ್ ಕುಳಿತು ವೀಕ್ಷಿಸಲು ಅನುಕೂಲವಾಗುವ ಪಾರಾಗೋಲ, ಮಕ್ಕಳ ಆಟಿಕೆ ಕೇಂದ್ರ, ವಾಯು ವಿಹಾರಕ್ಕಾಗಿ ವಾಕ್‌ಪಾತ್, ಕುಳಿತುಕೊಳ್ಳುವ ಸಿಮೆಂಟ್ ಬೆಂಚ್, ವಿವಿಧ ಬಗೆಯ ವನಗಳು, ಸಂದೇಶ ಫಲಕಗಳು, ಓಪನ್ ಡೈನಿಂಗ್ ಸೇರಿದಂತೆ ಹಲವು ಸೌಲಭ್ಯಗಳು ಇರಲಿದೆ.

ರಾಷ್ಟ್ರೀಯ ಹೆದ್ದಾರಿ ಪಕ್ಕ ಆಲಂಪುರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಟ್ರೀಪಾರ್ಕ್ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗಳನ್ನು ಸೆಳೆಯುವ ನಿರೀಕ್ಷೆ ಇದೆ. ಸಾರ್ವಜನಿಕರಿಗೆ ಅರಣ್ಯದ ಬಗೆಗಿನ ಮಾಹಿತಿ ಈ ಟ್ರೀ ಪಾರ್ಕ್ ಮೂಲಕ ಸಿಗಲಿದೆ. ನಿರ್ಮಾಣ ಕಾರ್ಯ ವೇಗವಾಗಿ ನಡೆಯುತ್ತಿದ್ದು ಶೀಘ್ರದಲ್ಲಿ ಉದ್ಘಾಟನೆಗೊಳ್ಳಲಿದೆ. ಶ್ರೀಧರ್, ಪ್ರಭಾರ ವಲಯ ಅರಣಾಧಿಕಾರಿ