ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಸರ್ಕಾರ ಆತ್ಮನಿರ್ಭರ ಭಾರತ ಘೋಷವಾಕ್ಯದೊಂದಿಗೆ ನಾನಾ ಯೋಜನೆಗಳನ್ನು ಪರಿಚಯಿಸುತ್ತಿದೆ. ಆದರೆ ಅವುಗಳನ್ನು ಸಮರ್ಥವಾಗಿ ಅನುಷ್ಠಾನಕ್ಕೆ ತರುವಲ್ಲಿ ಇಲಾಖೆ, ಸಂಘಸಂಸ್ಥೆಗಳು ಕೈಜೋಡಿಸಿದಲ್ಲಿ ಸ್ವಾವಲಂಬಿ ಜೀವನ ನಡೆಸಬಹುದು ಎಂಬುದನ್ನು ಬೆಳ್ತಂಗಡಿಯಲ್ಲಿ ಮಹಿಳೆಯರ ತಂಡವೊಂದು ನಿರೂಪಿಸಿದೆ.
ತಾಲೂಕಿನ ಅಳದಂಗಡಿ ತೋಟಗಾರಿಕಾ ರೈತ ಉತ್ಪಾದಕರ ಕಂಪನಿಯು ಮಹಿಳೆಯರನ್ನು ಒಗ್ಗೂಡಿಸಿ ಕಳೆದ ವರ್ಷದಿಂದ ಹಡಿಲುಬಿದ್ದ ಗದ್ದೆಯಲ್ಲಿ ಭತ್ತ, ಸಾವಯವ ತರಕಾರಿ ಬೆಳೆಯುವ ಮೂಲಕ ಸ್ವಾವಲಂಬನೆ ಜೀವನ ನಡೆಸುತ್ತಿದೆ. ಇದಕ್ಕೆ ಪೂರಕವಾಗಿ ರಾಷ್ಟ್ರಮಟ್ಟದ ಕೃಷಿ ಪ್ರಶಸ್ತಿ ವಿಜೇತ ಪ್ರಗತಿಪರ ಕೃಷಿಕ ಪ್ರಭಾಕರ್ ಮಯ್ಯ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಪ.ಪಂ ವ್ಯಾಪ್ತಿಯ ಕೋರ್ಟ್ ರಸ್ತೆಯಲ್ಲಿ ಹಡಿಲು ಬಿದ್ದ ಒಂದು ಎಕರೆ ಗದ್ದೆ ಈಗ ತರಕಾರಿ ಗಿಡಗಳಿಂದ ಹಚ್ಚಹಸಿರಾಗಿದೆ.
ಮಹಿಳೆಯರೇ ಕೆಲಸಗಾರರು: ಇಲ್ಲಿ ತರಕಾರಿ ಸಾಲು ನಿರ್ಮಾಣ, ಬಿತ್ತನೆ ಸೇರಿದಂತೆ ವಿವಿಧ ಕೆಲಸಗಳನ್ನು ನಿರ್ವಹಿಸುವವರು ಮಹಿಳೆಯರು. ವಕೀಲೆ ಸುಕನ್ಯಾ ಎಚ್. ಅವರ ಸಾರಥ್ಯದಲ್ಲಿ 7 ಮಹಿಳೆಯರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಳದಂಗಡಿ ತೋಟಗಾರಿಕಾ ರೈತ ಉತ್ಪಾದಕ ಕಂಪನಿ ಹಾಗೂ ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘದ ಸಿಬ್ಬಂದಿ ಪ್ರತೀ ಭಾನುವಾರ ತರಕಾರಿ ಕೃಷಿಯಲ್ಲಿ ಭಾಗಿಯಾಗುತ್ತಾರೆ. ಆ ಮೂಲಕ ಸಮುದಾಯ ಗ್ರಾಮೀಣ ಕೃಷಿ ಪದ್ಧತಿ ಉಳಿಸುವ ಪ್ರಯತ್ನ ನಡೆಸಲಾಗುತ್ತಿದೆ.
ಸ್ಥಳೀಯವಾಗಿ ಮಾರಾಟ: ಬೆಳೆದ ತರಕಾರಿಗಳನ್ನು ಸ್ಥಳೀಯವಾಗಿ ಮಾರಾಟ ಮಾಡುವ ಉದ್ದೇಶದಿಂದ ಕೋರ್ಟ್ ರಸ್ತೆಯಲ್ಲಿರುವ ಇಎಂಎಸ್ ಭವನದಲ್ಲಿ ಸ್ಫೂರ್ತಿ ತರಕಾರಿ ಮಾರಾಟ ಮಳಿಗೆ ತೆರೆಯಲಾಗಿದೆ. ವಿವಿಧ ಬಗೆಯ ತರಕಾರಿಗಳಾದ ಅಲಸಂಡೆ, ಬೆಂಡೆಕಾಯಿ, ಹಾಗಲಕಾಯಿ, ಸೌತೆಕಾಯಿ, ಮುಳ್ಳುಸೌತೆ, ಬಸಲೆ, ಅರಿವೆ ಸೊಪ್ಪು, ಬದನೆಕಾಯಿ, ಕುಂಬಳಕಾಯಿ, ಕಲ್ಲಂಗಡಿ ಬೆಳೆಯಲಾಗಿದೆ. ಕಳೆದ ವರ್ಷ ಈ ತಂಡ 7 ಕ್ವಿಂಟಾಲ್ ಭತ್ತ ಬೆಳೆದಿತ್ತು.
ಸಾವಯವ ಗೊಬ್ಬರ ಉಪಯೋಗಿಸುವ ಮೂಲಕ ತರಕಾರಿ ಬೆಳೆಯಲಾಗುತ್ತಿದೆ. ಮಹಿಳೆಯರ ಸ್ವಾವಲಂಬನೆ ಹಾಗೂ ಸ್ಥಳೀಯ ಮಾರುಕಟ್ಟೆ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
-ಸುಕನ್ಯಾ ಎಚ್., ನಿರ್ದೇಶಕಿ,
ಅಳದಂಗಡಿ ತೋಟಗಾರಿಕಾ ರೈತ ಉತ್ಪಾದಕರ ಕೇಂದ್ರ.