ಜಿಲ್ಲೆ

ಕಿಲಾಡಿ ಅಕ್ಕಿ ಮೆಚ್ಚಿದ ಗ್ರಿಲ್ಸ್!

ಚಾಮರಾಜನಗರ: ಸ್ಟಾರ್ ನಟನೆಂಬ ಹಮ್ಮು ಬಿಟ್ಟು ಸಾಮಾನ್ಯನಂತಿರುವ, ಜನಪರ ನಿರ್ಧಾರಗಳಿಂದ ಎಲ್ಲರ ಮೆಚ್ಚುಗೆ ಗಳಿಸಿರುವ ಬಾಲಿವುಡ್ ಕಿಲಾಡಿ ಅಕ್ಷಯ್ಕುಮಾರ್ ವ್ಯಕ್ತಿತ್ವಕ್ಕೆ ‘ಮ್ಯಾನ್ ವರ್ಸಸ್ ವೈಲ್ಡ್’ ಖ್ಯಾತಿಯ ಸಾಹಸಿಗ ಬೇರ್ ಗ್ರಿಲ್ಸ್ ಮಾರು ಹೋಗಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ನಡೆದ ಶೂಟಿಂಗ್​ನಲ್ಲಿ ಪಾಲ್ಗೊಂಡ ಅಕ್ಷಯ್ಕುಮಾರ್ ಅವರ ಲವಲವಿಕೆ, ನಡವಳಿಕೆಯನ್ನು ಮೆಚ್ಚಿರುವ ಗ್ರಿಲ್ಸ್, ತಮ್ಮ ಟ್ವಿಟರ್​ನಲ್ಲಿ ಅಕ್ಕಿ ಕುರಿತು ಹೊಗಳಿಕೆಯ ನುಡಿಗಳನ್ನಾಡಿದ್ದಾರೆ. ಚಿತ್ರೀಕರಣದ ವೇಳೆ ಅಕ್ಷಯ್ಕುಮಾರ್ ಅವರಲ್ಲಿ ಕಾಣುತ್ತಿದ್ದ ಚುರುಕುತನ, ಸಾಮರ್ಥ್ಯನ್ನು ಕಂಡು ಬೆರಗಾಗಿರುವ ಗ್ರಿಲ್ಸ್, ಅಕ್ಕಿ ಪಕ್ಕಾ ಫಿಟ್ ಎಂಬುದನ್ನು ಅರ್ಥೈಸಿಕೊಂಡಿದ್ದಾರೆ. ಮೌಂಟ್ ಎವರೆಸ್ಟ್ ಏರುವುದರಿಂದ ಹಿಡಿದು ವಿಶ್ವದ ಮೂಲೆ ಮೂಲೆಗಳಲ್ಲಿರುವ ದಟ್ಟ ಕಾಡುಗಳಲ್ಲಿ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮಕ್ಕಾಗಿ ಮೈನವಿರೇಳಿಸುವ ಸಾಹಸ ಪ್ರದರ್ಶಿಸಿರುವ ಬೇರ್​ಗ್ರಿಲ್ಸ್ ಕಾಡು ಸುತ್ತಲು ಅಕ್ಷಯ್ ಕುಮಾರ್ ಒಳ್ಳೆಯ ಜೋಡಿ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇನ್ನು ಅಕ್ಷಯ್ ಸಹ ಅರಣ್ಯದಲ್ಲಿ ನಡೆಸುವ ಸಾಹಸಗಳು ಮತ್ತು ಕಾಡಿನಲ್ಲಿ ಬದುಕುಳಿಯಲು ಸಿಕ್ಕ ವಸ್ತುಗಳನ್ನೇ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವ ಗ್ರಿಲ್ಸ್​ನ ತಂತ್ರಗಳಿಗೆ ಫಿದಾ ಆಗಿದ್ದು, ಈ ಕಲೆಯನ್ನು ತಾವೂ ಕಲಿಯಬೇಕು ಎಂದು ಶೂಟಿಂಗ್ ವೇಳೆ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.