ಜಿಲ್ಲೆ

ಸುಸಂಸ್ಕೃತ ಜನಾಂಗ ನಿರ್ಮಾಣವಾಗಲಿ: ಪ್ರಾಂಶುಪಾಲ ಕೆ.ಕೆ.ಚಂದ್ರಶೇಖರ್ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಶಿಕ್ಷಣ ಎಂಬುದು ಪುಸ್ತಕದ ಕಲಿಕೆ ಮಾತ್ರವಲ್ಲ. ಸಂಸ್ಕೃತಿ, ಸದ್ಗುಣ, ಸಂಸ್ಕಾರಗಳ ಸಮ್ಮಿಲನ. ಆದ್ದರಿಂದ ಮೌಲ್ಯಗಳನ್ನು ಬಿತ್ತುವ ಮೂಲಕ ಸುಸಂಸ್ಕೃತ ಜನಾಂಗ ನಿರ್ಮಾಣ ಮಾಡುವುದು ಮುಖ್ಯವಾಗಬೇಕಿದೆ ಎಂದು ಮಾಂಡವ್ಯ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಕೆ.ಕೆ.ಚಂದ್ರಶೇಖರ್ ತಿಳಿಸಿದರು.

ಕಲ್ಯಾಣ ಕರ್ನಾಟಕ ಪ್ರತಿಷ್ಠಾನ ಬೀದರ್ ವತಿಯಿಂದ ಆರಂಭವಾಗಿರುವ ಕರ್ನಾಟಕ ಸುವರ್ಣ ಸಂಭ್ರಮ-50ರ ಅಕ್ಷರ ಜ್ಯೋತಿ ಯಾತ್ರೆಯನ್ನು ನಗರದಲ್ಲಿ ಸ್ವಾಗತಿಸಿ, ಎಸ್.ಬಿ.ಸಮುದಾಯ ಭವನದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಚಿಂತನೆ ಇಲ್ಲದೆ ಯಾವುದೂ ಅರಳುವುದಿಲ್ಲ. ಚಿಂತನೆ, ಯೋಜನೆ, ಯೋಚನೆಗಳಿಂದ ಎಲ್ಲರೂ ಕ್ರಿಯಾಶೀಲರಾಗಿ ಸಮಾಜ ಕಟ್ಟುವಲ್ಲಿ ಸಕ್ರಿಯರಾಗಬೇಕಿದೆ. ಸಮಾಜದಲ್ಲಿನ ಕೊರತೆಗಳ ಬಗ್ಗೆ ಟೀಕಿಸುತ್ತಾ, ಕೊರಗುತ್ತಾ ಕೂರುವ ಬದಲು, ಒಂದಿಷ್ಟು ಕೈಗಳು ಒಂದಾಗಿ ದುಡಿದರೆ ನಮ್ಮ ಸುತ್ತಲಿನ ವ್ಯವಸ್ಥೆಯನ್ನು ಬದಲಿಸಿ ಸರಿಪಡಿಸಿ, ಸುಂದರಗೊಳಿಸಬಹುದು. ಕತ್ತಲೆಯನ್ನು ಶಪಿಸುವ ಬದಲು ಪುಟ್ಟ ಹಣತೆ ಬೆಳಗುವ ಸಂಕಲ್ಪ ಮಾಡಬೇಕಿದೆ ಎಂದು ಅಭಿಪ್ರಾಯಿಸಿದರು.

ಇಂದಿನ ವಿದ್ಯಾರ್ಥಿಗಳೇ ಮುಂದಿನ ಪ್ರಜೆಗಳು ಎಂಬಂತೆ ನಾವು ನಮ್ಮ ಭವಿಷ್ಯವನ್ನು ಉತ್ತಮಪಡಿಸಿಕೊಂಡು ದೇಶಕ್ಕೆ ಭದ್ರ ಬುನಾದಿ ಹಾಕಬೇಕು. ಇಂತಹ ಜ್ಯೋತಿ ಯಾತ್ರೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಬಹಳ ಮುಖ್ಯವಾದದ್ದು . ಇದು ಜೀವನದಲ್ಲಿ ತಿರುವು ಪಡೆದುಕೊಳ್ಳುವತ್ತ ಸಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಮಹತ್ವದವಾದ ತಿರುವು, ಉದ್ದೇಶ ತುಂಬಾ ವ್ಯಾಪ್ತಿಯನ್ನು ಒಳಗೊಂಡು ವಿಶಾಲವಾದದ್ದಾಗಿದೆ ಎಂದು ಪ್ರತಿಪಾದಿಸಿದರು.

ಪಕ್ಕದ ಜಿಲ್ಲೆಯ ಸಿದ್ದಗಂಗಾ ಮಠದ ಸ್ವಾಮೀಜಿಗಳ ಬಹುದೊಡ್ಡ ಆಶೀರ್ವಾದದೊಂದಿಗೆ ಈ ಪ್ರತಿಷ್ಠಾನವನ್ನು ಸ್ಥಾಪಿಸಿ ಅನ್ನ ಮತ್ತು ಅಕ್ಷರಕ್ಕಾಗಿ ಇಡೀ ಜೀವನವನ್ನು ತ್ಯಾಗ ಮಾಡಿದ್ದಾರೆ. ಹಾಲಿ ಇರುವ ಮಠಾಧೀಶರೂ ಸಹ ಇದನ್ನು ಸಹ ಮುಂದುವರಿಸಿದ್ದಾರೆ. ಇಂತಹ ಯಾತ್ರೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಾದದ್ದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.

ಹದಿಹರಯದ ವಯಸ್ಸಿನಲ್ಲಿ ಮನಸ್ಸು ಗೊಂದಲದಿಂದ ಕೂಡಿರುತ್ತದೆ. ಅದಕ್ಕೆ ಕಡಿವಾಣ ಹಾಕುವುದು ಬಹಳ ಮುಖ್ಯ. ಇಂತಹ ಸಂದರ್ಭದಲಿ ಬದುಕಿನ ಗುರಿಯನ್ನು ತೋರಿಸಿಕೊಡುವುದು ಅಕ್ಷರ ಯಾತ್ರೆಯ ಉದ್ದೇಶವಾಗಿದೆ. ಇದನ್ನು ಸಾಕಾರಗೊಳಿಸಿದರೆ ದೇಶ ಸುಭೀಕ್ಷವಾಗುತ್ತದೆ ಎಂಬ ಅಭಿಲಾಷೆಯನ್ನಿಟ್ಟುಕೊಂಡು ಬಂದಿರುವ ಜ್ಯೋತಿಯಾತ್ರೆಯನ್ನು ಎಲ್ಲರೂ ತಮ್ಮ ಮನೆಗಳಿಗೆ ಜ್ಯೋತಿಯನ್ನು ಹಚ್ಚಿದರೆ, ಅದಕ್ಕೊಂದು ಅರ್ಥ ಬರುತ್ತದೆ ಎಂದು ತಿಳಿಸಿದರು.

ಜಗದ್ಗುರು ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಷಡಕ್ಷರಿ ಮಾತನಾಡಿ, 60 ದಿನಗಳ ಕಾಲ ಹಮ್ಮಿಕೊಂಡಿರುವ ಯಾತ್ರೆ ರಾಜ್ಯಾದ್ಯಂತ ಸಂಚರಿಸಲಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಆಸಕ್ತಿ ಮೂಡಿಸಿ ಉನ್ನತ ಸಾಧನೆಗೆ ಛಲ ಮೂಡಿಸುವುದು, ವಿದ್ಯಾರ್ಥಿಗಳ ಮನೋಭಾವದಲ್ಲಿ ಸಕಾರಾತ್ಮಕ ಚಿಂತನೆ ಬೆಳೆಸುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ್, ರಾಷ್ಟ್ರ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶರಣ ಪಂಡಿತ ಕೆ.ಬಾಳೂರೆ ಹುಮನಾಬಾದ, ಕ್ರಾಂತಿಯೋಗಿ ಬಸವೇಶ್ವರ ನೌಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಮೇಶ್, ಕೆನರಾ ಬ್ಯಾಂಕ್‌ನ ಶಿವಾಬೇರವ ಮಾನೆ ಇತರರಿದ್ದರು.