ಅರಕಲಗೂಡು ಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಅಕ್ಷರ ಬಂಡಿ ಜಾಥಾ ನಡೆಸುವ ಮೂಲಕ ಶಾಲಾ ಪ್ರಾರಂಭೋತ್ಸವ ನಡೆಸಲಾಯಿತು. 
ಜಿಲ್ಲೆ

ಕೋಟೆಯಲ್ಲಿ ಅಕ್ಷರ ಬಂಡಿ ಜಾಥಾ

ರವಿಕುಮಾರ್ ಪಿ. ಕೆ

ಅರಕಲಗೂಡು: ಪಟ್ಟಣದ ಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಅಕ್ಷರ ಬಂಡಿ ಜಾಥಾ ನಡೆಸುವ ಮೂಲಕ ಶಾಲಾ ಪ್ರಾರಂಭೋತ್ಸವ ನಡೆಸಲಾಯಿತು.

ಶಾಲಾ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಇಒ ಕೆ.ಪಿ. ನಾರಾಯಣ್ ಅಕ್ಷರ ಬಂಡಿಯನ್ನು ನಡೆಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಜಾಥಾ ಸಾರ್ವಜನಿಕರ ಗಮನ ಸೆಳೆಯಿತು. ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿ ಸರ್ಕಾರಿ ಶಾಲೆಗೆ ಮಕ್ಕಳ ದಾಖಲಾತಿ ಕುರಿತು ಜನರಲ್ಲಿ ಅರಿವು ಮೂಡಿಸಿದರು.

ಬಿಇಒ ಕೆ.ಪಿ. ನಾರಾಯಣ್ ಮಾತನಾಡಿ, ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಸರ್ಕಾರಿ ಶಾಲೆಗಳಲ್ಲಿ ಉಚಿತ ಗುಣಮಟ್ಟದ ಶಿಕ್ಷಣದ ಜತೆಗೆ  ಹಲವು ಸವಲತ್ತುಗಳನ್ನು ಒದಗಿಸಲಾಗುತ್ತಿದೆ. ಪಾಲಕರು ಇದರ ಉಪಯೋಗ ಪಡೆದು ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡುವ ಮೂಲಕ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸಹಕಾರ ನೀಡುವಂತೆ ತಿಳಿಸಿದರು.

ಶಾಲೆಯ ಮುಖ್ಯಶಿಕ್ಷಕ ಹಾಗೂ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿ.ಎ.ರಂಗಸ್ವಾಮಿ ಮಾತನಾಡಿದರು. ಬಿಆರ್‌ಸಿ ಬಾಲರಾಜ್, ಟಿಪಿಇಒ ನಿಂಗಯ್ಯ, ಸಿಆರ್‌ಪಿಗಳಾದ ರೂಪಾ, ಬಾಲು, ಇಂದ್ರೇಗೌಡ, ಇಸಿಒ ಸದಾಶಿವಪ್ಪ, ನಾಗರಾಜ್, ಶಿವಪ್ರಕಾಶ್, ಶಾಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ನೀಡಿ ಸಿಹಿ ವಿತರಿಸಲಾಯಿತು.