ಜಿಲ್ಲೆ

ಅಕ್ರಮ ಮದ್ಯ ದಾಸ್ತಾನಿಗೆ ಕಸರತ್ತು, 4 ನೇ ಹಂತದ ಲಾಕ್‌ಡೌನ್ ಭೀತಿ, ಮದ್ಯದಂಗಡಿಗೆ ಬಂದ್ ಆಗುವ ಆತಂಕ

ಶಿವರಾಜ ಎಂ. ಬೆಂಗಳೂರು

ಕರೊನಾ ನಿಯಂತ್ರಣಕ್ಕಾಗಿ 4ನೇ ಹಂತದ ಲಾಕ್‌ಡೌನ್ ಮುಂದುವರಿಯುವ ಸಾಧ್ಯಾಸಾಧ್ಯತೆ ನಡುವೆಯೇ ಮತ್ತೊಂದು ಸುತ್ತಿನಲ್ಲಿ ಮದ್ಯದಂಗಡಿಗಳು ಬಂದ್ ಆಗಲಿವೆ ಎಂಬ ವದಂತಿಗೆ ರೆಕ್ಕೆಪುಕ್ಕ ಬರತೊಡಗಿದೆ. ಈ ಹಿನ್ನೆಲೆಯಲ್ಲಿ ಮದ್ಯದಂಗಡಿಗಳಿಗೆ ಮುಗಿಬಿದ್ದಿರುವ ಮದ್ಯಪ್ರಿಯರು ಮನೆಗಳಲ್ಲೇ ಬಾರ್ ತೆರೆಯುವ ಮಾದರಿಯಲ್ಲಿ ಮದ್ಯ ಸಂಗ್ರಹಿಸಲು ಮುಂದಾಗಿದ್ದಾರೆ.

ಹೌದು! 42 ದಿನಗಳ ಲಾಕ್‌ಡೌನ್ ಬಳಿಕ ಮದ್ಯದಂಗಡಿ ತೆರೆಯಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿತ್ತು. ಎಲ್ಲಿ ಮತ್ತೆ ಬಂದ್ ಮಾಡುತ್ತಾರೋ ಎಂಬ ಧಾವಂತದಲ್ಲಿ ಮುಗಿಬಿದ್ದ ಮದ್ಯಪ್ರಿಯರು ಖರೀದಿಯಲ್ಲಿ ದಾಖಲೆ ನಿರ್ಮಿಸಿದ್ದರು. ಮೇ 17ರ ಬಳಿಕ ಲಾಕ್‌ಡೌನ್ ಸಡಿಲಿಕೆೆ ಅಥವಾ ಮುಂದುವರಿಕೆ ಬಗ್ಗೆ ಚರ್ಚೆಗಳು ನಡೆಯುತ್ತಿರುವ ನಡುವೆಯೇ ಮದ್ಯದಂಗಡಿಗಳು ಬಾಗಿಲು ಹಾಕುತ್ತವೆಯೇ ಇಲ್ಲವೇ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.

ಜಾಲತಾಣಗಳಲ್ಲಿ ವೈರಲ್: ಮದ್ಯದಂಗಡಿ ತೆರೆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ತರಹೇವಾರಿ ಪೋಸ್ಟರ್ ಹರಿಬಿಟ್ಟಿದ್ದ ನೆಟ್ಟಿಗರು ಈಗ ಮತ್ತೊಮ್ಮೆ ಮದ್ಯದಂಗಡಿಗಳು ಬಂದ್ ಆಗಲಿವೆ ಎಂಬರ್ಥದ ಪೋಸ್ಟರ್‌ಗಳನ್ನು ಹರಿಬಿಡುತ್ತಿದ್ದಾರೆ. ಇದರಿಂದ ಕಂಗಾಲಾಗಿರುವ ಮದ್ಯಪ್ರಿಯರು ಬೇಕಾದಷ್ಟು ಮದ್ಯ ದಾಸ್ತಾನು ಮಾಡಿಕೊಳ್ಳುವ ಸಿದ್ಧತೆಯಲ್ಲಿ ತೊಡಗಿರುವುದು ಕಂಡುಬರುತ್ತಿದೆ.

ಮದ್ಯದಂಗಡಿಗಳಲ್ಲಿ ವಿಚಾರಣೆ: ಏಕೆ ಸ್ಟಾಕ್ ಬರುತ್ತಿಲ್ವಾ? ಮತ್ತೆ ಶಾಪ್ ಬಂದ್ ಮಾಡ್ತಾರಂತೆ ಹೌದಾ? ಹೀಗೆ ಪ್ರಶ್ನೆಗಳನ್ನು ಎಸೆಯುತ್ತಿರುವ ಗ್ರಾಹಕರಿಗೆ ಉತ್ತರಿಸುವಲ್ಲಿ ಮದ್ಯದಂಗಡಿಯವರು ಸುಸ್ತು ಹೊಡೆಯುತ್ತಿದ್ದಾರೆ. ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕು. ನಾವೇನು ಹೇಳೋಕೆ ಬರಲ್ಲ ಎಂದು ಸಮಜಾಯಿಷಿ ನೀಡುತ್ತಿದ್ದಾರೆ.

ಅಕ್ರಮ ಮದ್ಯ ಮಾರಾಟಕ್ಕೆ ಅವಕಾಶ: ಲಾಕ್‌ಡೌನ್ ವೇಳೆ ಅಕ್ರಮವಾಗಿ ಕೋಟ್ಯಂತರ ರೂ. ವಹಿವಾಟು ನಡೆದಿದೆ. ಅಬಕಾರಿ ಇಲಾಖೆಯೇ ಲಕ್ಷಾಂತರ ರೂ. ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಂಡು ನಾಶಪಡಿಸಿದ ಉದಾಹರಣೆಗಳಿವೆ. ಈ ಬಾರಿಯೂ ಇಂಥ ಅಕ್ರಮ ಮಾರಾಟಕ್ಕೆ ದಂಧೆಕೋರರರು ಸಜ್ಜಾಗಿದ್ದಾರೆ ಎಂಬ ಮಾತು ಹರಿದಾಡುತ್ತಿದೆ.

ಮದ್ಯದಂಡಿಗಳಿಂದಲೇ ಅಕ್ರಮ ದಾಸ್ತಾನು!

ಕಳೆದ ಲಾಕ್‌ಡೌನ್ ವೇಳೆ ನಷ್ಟ ಅನುಭವಿಸಿದ್ದ ಮದ್ಯದಂಗಡಿ ಮಾಲೀಕರು, ಮತ್ತೊಮ್ಮೆ ಬೀಗಬೀಳಬಹುದೆಂಬ ಆತಂಕದಲ್ಲಿ ಬೇರೆ ಕಡೆ ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಗ್ರಾಮೀಣ ಭಾಗದ ಗೂಡಂಗಡಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಎಷ್ಟು ಬೇಕಾದರೂ ಖರೀದಿಸಬಹುದು: ಲಾಕ್‌ಡೌನ್ ಸಡಿಲಿಕೆ ಬಳಿಕ ಗ್ರಾಹಕರಿಗೆ ಇಂತಿಷ್ಟೇ ಮದ್ಯ ನೀಡಬೇಕು ಎಂದು ಇಲಾಖೆ ಸೂಚನೆ ನೀಡಿತ್ತು. ಅದರಂತೆ ವ್ಯಕ್ತಿಯೊಬ್ಬರಿಗೆ ಒಂದು ಬಾರಿ 2 ಲೀಟರ್ ಮದ್ಯ ಖರೀದಿಗೆ ಅವಕಾಶ ನೀಡುವಂತೆ ಸೂಚಿಸಲಾಗಿತ್ತು. ಈಗ ಎಂಆರ್‌ಪಿ ಅಂಗಡಿ ಸೇರಿ ಎಲ್ಲ ಮದ್ಯದಂಗಡಿಗಳಿಗೆ ಮದ್ಯಮಾರಾಟ ಮಾಡಲು ಅನುಮತಿ ದೊರೆತಿದೆ. ಇದೇ ಅವಕಾಶ ಬಳಸಿಕೊಳ್ಳುತ್ತಿರುವವರು ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಖರೀದಿಸಿ ಅಕ್ರಮ ದಾಸ್ತಾನಿಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ಮನೆಗಳಲ್ಲಿ ಅಥವಾ ಮದ್ಯದಂಗಡಿ ಹೊರಗಡೆ ಕೇವಲ 2.3 ಲೀಟರ್ ಮದ್ಯ ದಾಸ್ತಾನಿಗೆ ಅವಕಾಶವಿದೆ. ಈ ಪ್ರಮಾಣಕ್ಕಿಂತ ಹೆಚ್ಚು ಮದ್ಯ ದಾಸ್ತಾನಿದ್ದರೆ ಅದನ್ನು ಅಕ್ರಮ ಎಂದು ಪರಿಗಣಿಸಿ ಜಪ್ತಿ ಮಾಡುವುದರೊಂದಿಗೆ ಕೇಸ್ ದಾಖಲಿಸಲಾಗುವುದು. ರವೀಂದ್ರ, ಅಬಕಾರಿ ಇಲಾಖೆ ಆಯುಕ್ತ, ಗ್ರಾಮಾಂತರ ಜಿಲ್ಲೆ