ಜಿಲ್ಲೆ

ಜಗತ್ತಿಗೆ ಬೆಳಕು ನೀಡಿದ ಭಾರತದ ಸಂಸ್ಕೃತಿ

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಅಕ್ಕಿಆಲೂರ: ಪಟ್ಟಣದ ಚನ್ನವೀರೇಶ್ವರ ಗ್ರಾಮೀಣ ಗುರುಕುಲ ಶಾಲೆಯಲ್ಲಿ ಶನಿವಾರ ಗುರುಕುಲ ಸಂಭ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಂದ ಪಾಲಕರ ಪಾದಪೂಜೆ ಸಮಾರಂಭ ಜರುಗಿತು. ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ಜಗತ್ತಿಗೆ ಭಾರತದ ಸಂಸ್ಕೃತಿ ಬೆಳಕು ನೀಡಿದೆ. ನ್ಯಾಯ, ನೀತಿ, ನೈತಿಕ ಪರಿಪಾಠ ಬೋಧಿಸಿದ್ದ ಗುರುಕುಲ ಶಿಕ್ಷಣ ವ್ಯವಸ್ಥೆ ಸಾತ್ವಿಕ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿತ್ತು. ಈ ದಿಸೆಯಲ್ಲಿ ಇಂದಿನ ಆಧುನಿಕ ಯುಗದಲ್ಲಿ ಚನ್ನವೀರೇಶ್ವರ ಗ್ರಾಮೀಣ ಗುರುಕುಲ ಶಾಲೆ ಮುನ್ನಡೆಯುತ್ತಿದೆ ಎಂದರು.
ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ವಿಜ್ಞಾನ-ತಂತ್ರಜ್ಞಾನ ಎಷ್ಟೇ ಮುಂದುವರಿದರೂ ನಮ್ಮ ಸನಾತನ ಸಂಸ್ಕೃತಿ ಎತ್ತಿ ಹಿಡಿಯುವಲ್ಲಿ ಶಾಲಾ- ಕಾಲೇಜುಗಳು ಗಮನ ಹರಿಸಬೇಕು ಎಂದರು.
ಶಂಕರಯ್ಯ ಹೊಸಮಠ ಶಾಸ್ತ್ರಿಗಳು ವೇದಮಂತ್ರೋಪದೇಶ ಪಠಿಸಿ, ವಿದ್ಯಾರ್ಥಿಗಳಿಗೆ ತಂದೆ-ತಾಯಂದಿರ ಮಹತ್ವ ತಿಳಿಸಿದರು. ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ನಾಗರಾಜ ಪಾವಲಿ, ನಿರ್ದೇಶಕ ಮಲ್ಲಿಕಾರ್ಜನ ಕಂಬಾಳಿ, ಮಲ್ಲಿಕಾರ್ಜುನಯ್ಯ ಮುತ್ತಿನಕಂತಿಮಠ, ಮಹೇಶ ಸಾಲವಟಗಿ, ಕವಿತಾ ಅರಳೇಶ್ವರ, ದಾನೇಶ್ವರಿ ಯಕಲಾಸಪುರ, ಲೋಕೇಶ ಸಾವಕ್ಕನವರ, ಕಾಂಚನಾ ಚವಟಿ, ಸುಜಾತ ಕೊಲ್ಲಾವರ, ನಿರ್ಮಲಾ ಉಪ್ಪಿನ, ಪೂಜಾ ದುರ್ಗದ, ಸುರೇಂದ್ರ ಕರೆಮ್ಮನವರ, ವಿಜಯ ಪರಶಿಕ್ಯಾತಿ ಇದ್ದರು.