ಜಿಲ್ಲೆ

ಶಿರೂರು ಮಠ ಪರ್ಯಾಯ ಪೂರ್ವಭಾವಿ ಅಕ್ಕಿ ಮುಹೂರ್ತ

ಗೋಪಾಲಕೃಷ್ಣ ಪಾದೂರ್

ಉಡುಪಿ: ಶಿರೂರು ಮಠದ ಪರ್ಯಾಯ ಪೂರ್ವಭಾವಿ 2ನೇ ಅಕ್ಕಿ ಮುಹೂರ್ತ ಗುರುವಾರ 11ಗಂಟೆಗೆ ವೃಷಭ ಲಗ್ನ ಸುಮೂಹೂರ್ತದಲ್ಲಿ ರಥಬೀದಿಯ ಮಠದಲ್ಲಿ ನಡೆಯಿತು.

ವಾಮನತೀರ್ಥ ಪರಂಪರೆಯ ಶ್ರೀ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ 9 ಗಂಟೆಗೆ ಶೀರೂರು ಮಠದಲ್ಲಿ ಪ್ರಾರ್ಥನೆ ಸಲ್ಲಿಸಿ, ಚಿನ್ನದ ಪಲ್ಲಕಿಯಲ್ಲಿ ಅಕ್ಕಿ ಮುಡಿಯನ್ನಿಟ್ಟು ಮೆರವಣಿಗೆ ಮೂಲಕ ತೆರಳಿ ಚಂದ್ರೇಶ್ವರ, ಅನಂತೇಶ್ವರ ದೇವಸ್ಥಾನ, ಆಚಾರ್ಯ ಮಧ್ವರ ಸನ್ನಿಧಿ, ಕೃಷ್ಣ ಮಠದಲ್ಲಿ ಕೃಷ್ಣ, ಮುಖ್ಯಪ್ರಾಣ ಗರುಡ ಸುಬ್ರಹ್ಮಣ್ಯ ವಾದಿರಾಜ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮರಳಿ ಶಿರೂರು ಮಠಕ್ಕೆ ಆಗಮಿಸಿದ ಅಕ್ಕಿ ಮುಡಿಗಳನ್ನು ದೇವರ ಎದುರಿನಲ್ಲಿಟ್ಟು ವಿದ್ವಾಂಸರು ಹಾಗೂ ಅಷ್ಟಮಠಗಳ ದಿವಾನರಿಗೆ ದಾನ ದಣೆ ಪ್ರದಾನ ಮಾಡಲಾಯಿತು.

ವಿವಿಧ ಮಠಾಧೀಶರ ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಭಾವಿ ಪರ್ಯಾಯ ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಪಲಿಮಾರು ಶ್ರೀ ವಿದ್ಯಾಧಿಶ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಅದಮಾರು ಕಿರಿಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಮುಷ್ಟಿ ಅಕ್ಕಿ ಸಮರ್ಪಣೆ ಮೂಲಕ ಅಕ್ಕಿಮುಹೂರ್ತ ನೆರವೇರಿಸಿದರು. ನಂತರ ಭಕ್ತರು ಸರತಿ ಸಾಲಿನಲ್ಲಿ ಬಂದು ಕೃಷ್ಣನಿಗೆ ಮುಷ್ಟಿ ಅಕ್ಕಿ ಸಮರ್ಪಿಸಿದರು.

ವಿದ್ವಾನ್​ ಕಂಬಳಕಟ್ಟ ಗಿರಿರಾಜ ತಂತ್ರಿ ಧಾರ್ಮಿಕವಿಧಿ ವಿಧಾನಗಳ ನೇತೃತ್ವ ವಹಿಸಿದ್ದರು. ಅಷ್ಟ ಮಠಾಧೀಶರಿಗೆ ಶಿರೂರು ಮಠದ ದಿವಾನ್​ ಡಾ. ಉದಯ್​ ಸರಳತ್ತಾಯ ಮಾಲಿಕಾ ಮಂಗಳಾರತಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮಠಕ್ಕೆ ಭೇಟಿ ನೀಡಿದರು. ಶಾಸಕರಾದ ಯಶ್ಪಾಲ್​ ಸುವರ್ಣ, ಗುರ್ಮೆ ಸುರೇಶ್​ ಶೆಟ್ಟಿ, ಉದ್ಯಮಿ ಮುನಿಯಾಲ್​ ಉದಯ್​ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ತಲ್ಲೂರು ಶಿವರಾಮ ಶೆಟ್ಟಿ, ಡಾ. ಕೃಷ್ಣ ಪ್ರಸಾದ್​, ಕಿರಣ್​ ಕುಮಾರ್​, ನಗರಸಭಾ ಸದಸ್ಯರಾದ ರಮೇಶ್​ ರಾಂಚನ್​, ಅಮೃತಾ ಕೃಷ್ಣಮೂರ್ತಿ, ಲಕ್ಷಿ$್ಮನಾರಾಯಣ ಆಸ್ರಣ್ಣ, ಪ್ರದಿಪ್​ ಕಲ್ಕೂರು, ಇಂದ್ರಾಳಿ ಜಯಕರ ಶೆಟ್ಟಿ, ನಾಗೇಶ್​ ಹೆಗ್ಡೆ ಉಪಸ್ಥಿತರಿದ್ದರು.