ಜಿಲ್ಲೆ

ಮಾ.6ರಂದು ಶೀರೂರು ಮಠದಲ್ಲಿ ಅಕ್ಕಿ ಮುಹೂರ್ತ...

ಭಾವಿ ಪರ್ಯಾಯ ವೇದವರ್ಧನ ಶ್ರೀ ಮಾಹಿತಿ

ಅನ್ನದಾನಕ್ಕೆ ಕೈಜೋಡಿಸುವಂತೆ ಸದ್ಭಕ್ತರಿಗೆ ಕರೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಉಡುಪಿ ಶ್ರೀಕೃಷ್ಣನ ಮುಂದಿನ ಪರ್ಯಾಯ ಸೇವೆಯು ಅಷ್ಟ ಮಠಗಳಲ್ಲೊಂದಾದ ಶೀರೂರು ಮಠಕ್ಕೆ ಒದಗಿಬಂದಿದ್ದು, ನಮ್ಮ ಪ್ರಥಮ ಪರ್ಯಾದಲ್ಲಿ ಅನ್ನದಾನಕ್ಕೆ ಪ್ರಥಮಾದ್ಯತೆ ನೀಡಲಾಗಿದೆ. ತನ್ನಿಮಿತ್ತ ಮಾ.6ರಂದು ಬೆಳಗ್ಗೆ 11:10ಕ್ಕೆ ಸಲ್ಲುವ ವೃಷಭ ಲಗ್ನದಲ್ಲಿ ಶ್ರೀಮಠದಲ್ಲಿ ಅಕ್ಕಿ ಮುಹೂರ್ತ ನಡೆಯಲಿದೆ ಎಂದು ಶೀರೂರು ಮಠಾಧೀಶ ವೇದವರ್ಧನ ತೀರ್ಥ ಶ್ರೀಪಾದರು ಮಾಹಿತಿ ನೀಡಿದರು.

ಉಡುಪಿಯ ಶೀರೂರು ಮಠದಲ್ಲಿ ಮಾ.1ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಗದೋದ್ಧಾರಕ ಶ್ರೀಕೃಷ್ಣ ದೇವರಿಗೆ ನಿತ್ಯವೂ 16 ಪೂಜೆಗಳು, ವಿವಿಧ ಭಕ್ಷ್ಯ ಭೋಜ್ಯ, ಅನ್ನ ನೈವೇದ್ಯದ ಸಮರ್ಪಣೆಯೊಂದಿಗೆ ನಿತ್ಯ ಆಗಮಿಸುವ ಸಹಸ್ರ ಸಂಖ್ಯೆಯ ಭಕ್ತರಿಗೆ ಅನ್ನ ಪ್ರಸಾದದ ವಿತರಣೆ ಆಗಬೇಕಿದೆ. ಅನ್ನಬ್ರಹ್ಮನಾದ ಶ್ರೀಕೃಷ್ಣನಿಗೂ ಸಹ ಅನ್ನದಾನವೇ ಶ್ರೇಷ್ಠ ಹಾಗೂ ಇಷ್ಟದ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಪರ್ಯಾಯ ಆರಂಭಗೊಳ್ಳುವ 9 ತಿಂಗಳ ಮೊದಲೇ ಅಕ್ಕಿ ಸಂಗ್ರಹಕ್ಕೆ ಯೋಜಿಸಿದ್ದು, ಸದ್ಭಕ್ತರು ಈ ಕಾರ್ಯದಲ್ಲಿ ಕೈಜೋಡಿಸಿ, ಕೃಷ್ಣ ಸೇವೆಯಲ್ಲಿ ಭಾಗಿಯಾಗಬೇಕು ಎಂದರು.

ಎಲ್ಲ ಮಠಾಧೀಶರ ಉಪಸ್ಥಿತಿ

ಶೀರೂರು ಮಠದ ದಿವಾನ ಉದಯಕುಮಾರ ಸರಳತ್ತಾಯ ಮಾತನಾಡಿ, ಈಗಾಗಲೇ ಕಳೆದ ಡಿಸೆಂಬರ್​ ತಿಂಗಳಲ್ಲಿ ಶೀರೂರು ಪರ್ಯಾಯದ ಪ್ರಥಮ ಕಾರ್ಯವಾಗಿ ಬಾಳೆ ಮುಹೂರ್ತ ನಡೆದಿದೆ. ಎಲ್ಲ ಮುಹೂರ್ತಗಳಿಗಿಂತಲೂ ಅಕ್ಕಿ ಮುಹೂರ್ತ ಅತ್ಯಂತ ಮಹತ್ವದ ಕಾರ್ಯವಾಗಿದೆ. ಮಾ.6ರಂದು ಬೆಳಗ್ಗೆ 6 ಗಂಟೆಗೆ ಎಲ್ಲ ಮಠಗಳಿಗೆ ತೆರಳಿ ಶ್ರೀಗಳಿಗೆ ಆಹ್ವಾನ ನಡೆಯಲಿದೆ. ಎಲ್ಲ ಶ್ರೀಗಳು ತಮ್ಮ ಪಟ್ಟದ ದೇವರುಗಳೊಂದಿಗೆ ಶೀರೂರು ಮಠಕ್ಕೆ ಆಗಮಿಸಿ ಪೂಜೆ ನೆರವೇರಿಸಲಿದ್ದಾರೆ. ಬೆಳಗ್ಗೆ 9 ಗಂಟೆಗೆ ಶೀರೂರು ಮಠದ ಪಟ್ಟದ ದೇವರಾದ ವಿಠ್ಠಲ ದೇವರಿಗೆ ಪೂಜೆ, ಪ್ರಾರ್ಥನೆ ನಡೆಯಲಿದೆ ಎಂದರು.

ಅಕ್ಕಿ ಮುಡಿಯೊಂದಿಗೆ ಮೆರವಣಿಗೆ

ಬೆಳಗ್ಗೆ 9:30ಕ್ಕೆ ಶೀರೂರು ಮಠದಿಂದ ಮೆರವಣಿಗೆ ಹೊರಟು ರಥಬೀದಿಯಲ್ಲಿರುವ ಚಂದ್ರಮೌಳೇಶ್ವರ, ಅನಂತೇಶ್ವರ ದೇಗುಲ, ಶ್ರೀಕೃಷ್ಣ ಮಠ, ಮುಖ್ಯಪ್ರಾಣ ಹಾಗೂ ಗರುಡ ದೇವರಿಗೆ ಪ್ರದಕ್ಷಿಣಾಕಾರವಾಗಿ ಪ್ರಾರ್ಥನೆ ನಡೆಯಲಿದೆ. ನಂತರ ಸಂಸ್ಕೃತ ಕಾಲೇಜಿನ ಬಳಿ ಸಂಗ್ರಹಿಸಿರುವ ಅಕ್ಕಿ ಮುಡಿಯನ್ನು ಸ್ವರ್ಣ ಪಲ್ಲಕಿಯಲ್ಲಿಟ್ಟು ಮತ್ತೆ ಮೆರವಣಿಗೆ ಮೂಲಕ ಶ್ರೀಮಠಕ್ಕೆ ಆಗಮಿಸಿ 11:10ಕ್ಕೆ ಅಕ್ಕಿ ಮುಹೂರ್ತ ನಡೆಯಲಿದೆ ಎಂದು ತಿಳಿಸಿದರು.

ಆಮಂತ್ರಣ ಪತ್ರಿಕೆ ಬಿಡುಗಡೆ

ಮುಂದಿನ ಪರ್ಯಾಯ ಸೇವೆ ಹಾಗೂ ಅಕ್ಕಿ ಮುಹೂರ್ತದ ಹಿನ್ನೆಲೆಯಲ್ಲಿ ಶ್ರೀಗಳು ಮಠದ ಸದ್ಭಕ್ತರು, ವಿವಿಧ ಪಕ್ಷಗಳ ನಾಯಕರು ಹಾಗೂ ಮಠದ ಹಿತೈಷಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದರು. ಇದೇ ವೇಳೆ ಆಮಂತ್ರಣ ಪತ್ರಿಕೆಯನ್ನೂ ಶ್ರೀಗಳು ಬಿಡುಗಡೆ ಮಾಡಿದರು. ಶಾಸಕ ಯಶ್​ಪಾಲ್​ ಸುವರ್ಣ, ನಗರಸಭಾ ಅಧ್ಯಕ್ಷ ಪ್ರಭಾಕರ್​ ಪೂಜಾರಿ, ಪ್ರಮುಖರಾದ ರಮೇಶ್​ ಕಾಂಚನ್​, ಕೃಷ್ಣಮೂರ್ತಿ ಆಚಾರ್ಯ, ಉದಯಕುಮಾರ್​ ಶೆಟ್ಟಿ ಮುನಿಯಾಲು, ಸಂಧ್ಯಾ ರಮೇಶ್​, ಮೋಹನ್​ ಭಟ್​, ಬಾಲಕೃಷ್ಣ ಶೆಟ್ಟಿ, ಗಣೇಶ್​ ನೆರ್ಗಿ, ಸತೀಶಕುಮಾರ್​ ಮಂಚಿ ಇತರರಿದ್ದರು.
ಶ್ರೀಕೃಷ್ಣನ ಸ್ಪರ್ಷ ಪೂಜೆಗೆ ಕೇವಲ ಯತಿಗಳಿಗೆ ಮಾತ್ರ ಅವಕಾಶ ಇದೆ. ಹೀಗಾಗಿ ಭಕ್ತರಿಗೂ ಕೃಷ್ಣನ ಸೇವೆ ಸಲ್ಲಿಸಲು ಅವಕಾಶ ಲಭಿಸುವಂತಾಗಲು ಮಧ್ವಾಚಾರ್ಯರು ಬಾಳೆ ಮುಹೂರ್ತ ಹಾಗೂ ಅಕ್ಕಿ ಮುಹೂರ್ತಗಳಲ್ಲಿ ಭಕ್ತರು ಪಾಲ್ಗೊಳ್ಳಲು ವ್ಯವಸ್ಥೆ ಕಲ್ಪಿಸಿದ್ದಾರೆ. ದೇವತಾ ಕಾರ್ಯ ಹಾಗೂ ಪಿತೃ ಕಾರ್ಯಗಳಲ್ಲಿ ಅನ್ನದಾನಕ್ಕೆ ವಿಶೇಷ ಸ್ಥಾನ ಇರುವುದರಿಂದ ಅಕ್ಕಿ ನೀಡುವ ಮೂಲಕ ಅನ್ನದಾನಕ್ಕೆ ಸಹಕರಿಸಬಹುದು. ಸಣ್ಣ ಅಕ್ಕಿ ಮುಡಿಗೆ ಒಂದು ಸಾವಿರ ರೂ. ಶುಲ್ಕ ನಿಗದಿ ಮಾಡಲಾಗಿದೆ. ತನ್ಮೂಲಕ ಕೃಷ್ಣನ ಸೇವೆಯಲ್ಲಿ ಪಾಲ್ಗೊಳ್ಳಬೇಕು. | ವೇದವರ್ಧನ ತೀರ್ಥ ಶ್ರೀಪಾದರು. ಶೀರೂರು ಮಠ ಪರ್ಯಾಯ ಉತ್ಸವವೇ ಉಡುಪಿಗೆ ನಾಡಹಬ್ಬವಾಗಿದೆ. ಅದಕ್ಕೆ ಸಂಬಂಧಿಸಿದ ಅಕ್ಕಿ ಮುಹೂರ್ತ ಅತ್ಯಂತ ಶ್ರೇಷ್ಠ ಕಾರ್ಯವಾಗಿದೆ. ಅಲ್ಲದೆ, ಶ್ರೀಕೃಷ್ಣನ ಸೇವೆಗೆ ಭಕ್ತರಿಗೆ ಒದಗಿಬರುವ ಪುಣ್ಯಕರ ದಿನವಾಗಿದೆ. ಅಕ್ಕಿ ಮುಹೂರ್ತದಲ್ಲಿ ಉಡುಪಿಯ ಜನತೆ ಪಾಲ್ಗೊಳ್ಳಬೇಕು ಎಂದು ಶೀರೂರು ಮಠದ ವತಿಯಿಂದ ಹಾಗೂ ಶಾಸಕನ ನೆಲೆಯಿಂದ ಆಹ್ವಾನಿಸುತ್ತೇನೆ. | ಯಶ್​ಪಾಲ್​ ಸುವರ್ಣ. ಉಡುಪಿ ಶಾಸಕ