ವಿಜಯಪುರ: ಶೈಕಣಿಕ ಕ್ರಾಂತಿಯಲ್ಲಿ ವಿಶ್ವವಿದ್ಯಾನಿಲಯಗಳ ಪಾತ್ರ ಪ್ರಮುಖವಾಗಿದ್ದು, ಪತ್ರಿಯೊಬ್ಬರು ಉನ್ನತ ಶಿಕ್ಷಣ ಪಡೆಯುವುದರ ಮೂಲಕ ತಮ್ಮ ಜೀವನದಲ್ಲಿ ಯಶಸ್ಸು ಕಾಣಬೇಕು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ ಹೇಳಿದರು.
ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 21ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಜೀವನದಲ್ಲಿ ಶಿಕ್ಷಣ ವ್ಯವಸ್ಥೆ ಅತೀ ಮುಖ್ಯವಾದ ಭಾಗ. ಕಾಲಕ್ಕೆ ತಕ್ಕಂತೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಆಗುತ್ತಿರುವ ಬದಲಾವಣೆಗಳು ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ಇಡೀ ವಿಶ್ವದ ಗಮನ ಸೆಳೆಯುತ್ತಿರುವುದು ಹೆಮ್ಮೆಯ ವಿಚಾರ. ನಮ್ಮ ರಾಷ್ಟ್ರದಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಬಂದು ಉನ್ನತ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳು ಹೊಸ-ಹೊಸ ಆವಿಷ್ಕಾರಗಳು ಕೂಡ ಇದಕ್ಕೆ ಕಾರಣ ಎಂದರು.
ಇಂದಿನ ಯುವ ಪೀಳಿಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿಯಬೇಕಿದೆ. ಅಂಕಗಳಿಗಾಗಿ ಮಾತ್ರ ಶಿಕ್ಷಣ ಸೀಮಿತವಾಗಿರದೇ ನಿಮ್ಮದೇ ಆದ ಕೌಶಲಗಳನ್ನು ಬೆಳೆಸಿಕೊಂಡು ಮುಂದೆ ಬರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಕುಲಪತಿ ಪ್ರೊ.ಬಿ.ಕೆ. ತುಳಸಿಮಾಲ ಮಾತನಾಡಿ, ಮಹಿಳೆಯರ ಅಭಿವೃದ್ಧಿಯಲ್ಲಿ ಸಮಾಜದ ಬದಲಾವಣೆಗಳು ಕೂಡ ಅವಶ್ಯ. ಮಹಿಳಾ ಶಿಕ್ಷಣದ ಅಭಿವೃದ್ಧಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅದನ್ನು ಮುಂದಿನ ದಿನಗಳಲ್ಲಿ ಹೇಗೆ ಮುನ್ನಡೆಸಬೇಕು ಎಂಬುದು ಸವಾಲಾಗಿದೆ ಎಂದರು.
ಸಾಕಷ್ಟು ವಿಶ್ವವಿದ್ಯಾನಿಲಯಗಳ ಜೊತೆ ಪೈಪೋಟಿ ನೀಡಬೇಕಾದರೆ ಗುಣಮಟ್ಟದ ಶಿಕ್ಷಣ ಅವಶ್ಯಕ ಮತ್ತು ವಿದ್ಯಾರ್ಥಿಗಳ ಔಚಿತ್ಯಪೂರ್ಣ ಶಿಕ್ಷಣ ನೀಡುವ ಜವಾಬ್ದಾರಿ ವಿಶ್ವವಿದ್ಯಾನಿಲಯದ್ದಾಗಿರುತ್ತದೆ. ಡಿಜಿಟಲ್ ತಂತ್ರಜ್ಞಾನದ ಮೂಲಕ ನಮ್ಮ ಶಿಕ್ಷಣ ಮುಂದುವರಿಸಿಕೊಂಡು ವಿದ್ಯಾರ್ಥಿಗಳ ಅರ್ಹತೆಗೆ ಅನುಗುಣವಾಗಿ ಶಿಕ್ಷಣ ನೀಡುವುದು ವಿಶ್ವವಿದ್ಯಾನಿಲಯಗಳ ಜವಾಬ್ದಾರಿಗಳಾಗಿವೆ. ಹೊಸ ರೀತಿಯ ಆವಿಷ್ಕಾರಗಳಿಗೆ ಅವಕಾಶಗಳನ್ನು ಕಲ್ಪಿಸಿಕೊಡುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ಸಹಕಾರಿ ಯಾಗುವ ನಿಟ್ಟಿನಲ್ಲಿ ಕೆಲಸಮಾಡಲಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ತಾವು ಸಾಗುವ ದಾರಿಯನ್ನು ಸ್ಮರಿಸಿಕೊಳ್ಳುತ್ತಾ ಸುಸ್ಥಿರ ಸಮಾಜ ಕಟ್ಟುವಲ್ಲಿ ಭಾಗಿಯಾಗಿ ಎಂದು ಸಲಹೆ ನೀಡಿದರು.
ಪ್ರೊ.ರೇಣುಕಾ ಮೇಟಿ ಸನ್ಮಾನ ನೆರವೇರಿಸಿದರು. ಮೌಲ್ಯಮಾಪನ ಕುಲಸಚಿವ ಪ್ರೊ.ಚಂದ್ರಶೇಖರ ಎಚ್.ಎಂ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಶೋಧನಾ ವಿದ್ಯಾರ್ಥಿನಿ ಶಾದಿಕಾ ನವಾಜಿ ಅತಿಥಿ ಪರಿಚಯವನ್ನು ಮಾಡಿದರು. ಶಿಕ್ಷಣ ಅಧ್ಯಯನ ವಿಭಾಗದ ವಿದ್ಯಾರ್ಥಿನಿಯರಾದ ಕಾವ್ಯಾ ಬಡಿಗೇರ ನಿರೂಪಿಸಿದರು. ಹೂವಕ್ಕ ದೆನಕರ ವಂದಿಸಿದರು.