ಜಿಲ್ಲೆ

ಮಹಿಳಾ ಪರ ಧ್ವನಿ ಎತ್ತಿದ ಶರಣೆ

Davangere - Desk - Ganesh M K

ಹರಿಹರ: ಮಹಿಳೆಯರ ಸ್ವಾತಂತ್ರ್ಯ ಮತ್ತು ಹಕ್ಕುಗಳ ಕುರಿತು 12ನೇ ಶತಮಾನದಲ್ಲೇ ಧ್ವನಿ ಎತ್ತಿದ ಕೀರ್ತಿ ಅಕ್ಕಮಹಾದೇವಿ ಅವರಿಗೆ ಸಲ್ಲುತ್ತದೆ ಎಂದು ಪ್ರಾಚಾರ್ಯೆ ಟಿ.ಡಿ. ಸುಜಾತಾ ಅಭಿಪ್ರಾಯಪಟ್ಟರು.

ನಗರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಶ್ರೇಷ್ಠಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಮೈಸೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಹರಿಹರ ತಾಲೂಕು ಕದಳಿ ಮಹಿಳಾ ವೇದಿಕೆ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತಿ, ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಕ್ಕಮಹಾದೇವಿ ಧಾರ್ಮಿಕ ವಿಧಿ, ವಿಧಾನಗಳಿಗೆ ಕಟ್ಟು ಬೀಳದೆ ವೈಚಾರಿಕತೆ ರೂಢಿಸಿಕೊಂಡು ಆ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು. ವಿಶೇಷವಾಗಿ ಮಹಿಳಾ ಸ್ವಾತಂತ್ರ್ಯ, ಹಕ್ಕುಗಳನ್ನು ಪ್ರತಿಪಾದಿಸಿ ಸಮಾಜದಲ್ಲಿ ಬದಲಾವಣೆ ತಂದರು ಎಂದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿಯ ಶಿವದೇವಿ ಮಾತನಾಡಿ, ಅಕ್ಕಮಹಾದೇವಿ ವೈರಾಗ್ಯ ಸ್ವರೂಪ ಹೊಂದಿದ್ದರು. ಅವರು ನಾಡಿನ ಜನತೆ ಹಾಗೂ ಪ್ರಕೃತಿಯಲ್ಲಿ ಶರಣತ್ವ ತುಂಬುವ ಪ್ರಯತ್ನ ಮಾಡಿದರು ಎಂದರು.

12ನೇ ಶತಮಾನದ ಕಲಹ ಮತ್ತು ರಾಜಕೀಯ ಅನಿಶ್ಚಿತತೆಯ ಸಮಯದಲ್ಲಿ ಆಧ್ಯಾತ್ಮಿಕ ಜ್ಞಾನಕ್ಕಾಗಿ ಹಾತೊರೆದರು. ತನ್ನ ಮನಸ್ಸು ದೇಹ ಮತ್ತು ಆತ್ಮ ಶಿವನಿಗೆ ಸೇರಿದ್ದು ಎಂದು ಚನ್ನಮಲ್ಲಿಕಾರ್ಜುನರ ಉಪಾಸನೆ ಮಾಡಿದರು ಎಂದರು.

ಅ.ಭಾ.ಶ.ಸಾ. ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಬಿ.ಟಿ. ಪ್ರಕಾಶ್ ಮಾತನಾಡಿ, ಪಾಲಕರು ಕೆಲಸದ ಒತ್ತಡ ನಡುವೆಯೂ ಮಕ್ಕಳಿಗೆ ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ, ವೈಚಾರಿಕ ವಿಚಾರಗಳನ್ನು ಪರಿಚಯ ಮಾಡಿಕೊಡಬೇಕು ಎಂದರು.

ಹರಿಹರ ತಾಲೂಕು ಕದಳಿ ಮಹಿಳಾ ವೇದಿಕೆಯ ಸದಸ್ಯರಿಂದ ಮತ್ತು ಬಿ.ಟಿ. ಪ್ರಕಾಶ್ ಅವರ ವಚನ ಗಾಯನ ವಿದ್ಯಾರ್ಥಿಗಳ ಗಮನ ಸೆಳೆಯಿತು.
ಸಂಗೀತ ಶಿಕ್ಷಕ್ಷಿ ಜಯಶ್ರೀ ಎಚ್. ಶ್ರೀಧರ್, ದತ್ತಿ ದಾನಿ ಯಶೋದಾ ಕೊಂಡಜ್ಜಿ, ಕದಳಿ ಮಹಿಳಾ ವೇದಿಕೆಯ ಹರಿಹರ ತಾಲೂಕು ಘಟಕದ ಅಧ್ಯಕ್ಷೆ ರೂಪಾ, ಪದಾಧಿಕಾರಿಗಳಾದ ಸುನೀತಾ ಮಲ್ಲೇಶ ಮಾರವಳ್ಳಿ, ವೀರಮ್ಮ ಅಶೋಕ, ಪ್ರೇಮಾ ಎಸ್. ಓಂಕಾರಪ್ಪ, ಎನ್. ಮಂಜುಳಾ, ಎಚ್.ಕೆ. ಜ್ಯೋತಿ ನಾಗರಾಜ್, ಸುಧಾ ಬಣಕಾರ್, ಮಂಗಳಾ ಪಟೇಲ, ಎಂ.ಎಸ್. ಕವಿತಾ, ಶಿವಲಿಂಗಮ್ಮ ಹುಲ್ಮನಿ, ಶಂಕುತಲಾ ಪವಾರ್, ಮಮತಾ ಬೆಲ್ಲದ, ಭಾರತಿ ಪ್ರಕಾಶ್ ಇತರರಿದ್ದರು.