ಬೆಂಗಳೂರು: ಕಾವ್ಯಗಳ ನಾಯಕಿಯರಾದ ಸೀತೆ, ದ್ರೌಪದಿ, ಕುಂತಿ, ಅಹಲ್ಯೆ, ದಮಯಂತಿಯರು ಬದುಕಿನಲ್ಲಿ ಸಾಕಷ್ಟು ಕಷ್ಟಪಟ್ಟಿದ್ದಾರೆ. ಕನ್ನಡದ ನಿಜದ ನಾಯಕಿ ಅಕ್ಕಮಹಾದೇವಿ ತನ್ನ ಗುರಿಸಾಧನೆಯಿಂದ ಸ್ತ್ರೀಸಂಕುಲಕ್ಕೆ ಮಾದರಿಯಾಗಿದ್ದಾರೆ ಎಂದು ಮುಕ್ತಾಯಕ್ಕ ಬಳಗದ ಅಧ್ಯಕ್ಷೆ ರತ್ನಾದೇಸಾಯಿ ಬಣ್ಣಿಸಿದ್ದಾರೆ.
ವಚನಜ್ಯೋತಿ ಬಳಗವು ಕೆಂಗೇರಿಯಲ್ಲಿ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತಿಯಲ್ಲಿ ಪೌರಾಣಿಕ ಪಾತ್ರಗಳು ಮತ್ತು ಅಕ್ಕಮಹಾದೇವಿ ಕುರಿತು ಉಪನ್ಯಾಸ ನೀಡಿದರು.
ಕಣ್ಣೀರಿನಲ್ಲೇ ಕೈತೊಳೆದ ಸೀತೆಯನ್ನು, ನೋವಿನಲ್ಲೇ ಬೆಂದ ದ್ರೌಪದಿಯನ್ನು, ಕೊರಗುತ್ತ ಕಳೆದ ಕುಂತಿಯನ್ನು, ಕಲ್ಲಾಗಿ ಕುಳಿತ ಅಹಲ್ಯೆಯನ್ನು ತೋರಿಸಿ ಶತ ಶತಮಾನಗಳಿಂದಲೂ ಹೆಣ್ಣನ್ನು ಸಮಾಧಾನ ಮಾಡುವ ನೆಪದಲ್ಲಿ ಶೋಷಣೆ ಮಾಡುತ್ತಿರುವುದು ಖಂಡನೀಯ. ಅವರೆಲ್ಲರಿಗಿಂತ ಅಪ್ಪಅಮ್ಮರ ಕ್ಷೇಮಕ್ಕಾಗಿ ಕೌಶಿಕನನ್ನು ಮದುವೆಯಾದರೂ, ಬುದ್ದಿವಂತಿಕೆಯಿಂದ ಪಾಲಿಸಲಾಗದ ಷರತ್ತುಗಳನ್ನು ಹಾಕಿ ಅವನನ್ನು ಧಿಕ್ಕರಿಸಿ ಕಾಡುಮೇಡುಗಳಲ್ಲಿ ಸಂಚರಿಸಿ ಅನುಭವ ಮಂಟಪದಲ್ಲಿ ಬಸವಣ್ಣ, ಅಲ್ಲಮ, ಸಮಸ್ತ ವಚನಕಾರರಿಂದ ಅಕ್ಕ ಎಂದು ಕರೆಸಿಕೊಂಡು ಕದಳಿಯಲ್ಲಿ ತನ್ನ ಗುರಿಸಾಧಿಸಿ ನಿಜದಲ್ಲಿ ಬಯಲಾದ ಮಹಾದೇವಿಯಕ್ಕ ನಿಜವಾದ ನಾಯಕಿಯಾಗಿ ಕಾಣಿಸುತ್ತಾಳೆ ಎಂದು ವಿವರಿಸಿದರು.
ಕಾರ್ಯಕ್ರಮವನ್ನು ಸ್ವಾಭಿಮಾನಿ ಮಹಿಳಾ ಟ್ರಸ್ಟ್ ಅಧ್ಯಕ್ಷೆ ಡಾ. ಅನುಪಮಾ ಪಂಚಾಕ್ಷರಿ ಉದ್ಘಾಟಿಸಿದರು. ವಚನಜ್ಯೋತಿ ಬಳಗದ ಎಸ್. ಪಿನಾಕಪಾಣಿ ಅಧ್ಯಕ್ಷತೆ ವಹಿಸಿದ್ದರು. ಅಕ್ಕಮಹಾದೇವಿ ಜಯಂತಿಯ ಅಂಗವಾಗಿ ಅಕ್ಕನ ಬಳಗದ ಅಧ್ಯಕ್ಷೆ ಸರ್ವಮಂಗಳ, ಸರಸ್ವತಿ ಸಂಗೀತ ಸಾಹಿತ್ಯ ಸದನದ ಅಧ್ಯಕ್ಷೆ ಜಯಲಕ್ಷಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಕ್ಕನ ಬಳಗದ ಸದಸ್ಯರು ವಚನಗಳನ್ನು ಹಾಡಿದರು. ರಮಾ ಹೆಬ್ಬಾರ್ ಹರಿಹರ ಕವಿಯ ಮಹಾದೇವಿಯಕ್ಕನ ರಗಳೆಯ ಗಮಕ ವಾಚನ ಮಾಡಿದರು. ಮಧು ಶಿವಕುಮಾರ್, ಗೀತಾ ಭತ್ತದ್, ರಾಜಾ ಗುರುಪ್ರಸಾದ್, ಗುಂಡೀಗೆರೆ ವಿಶ್ವನಾಥ್, ರಾಜು ಪವಾರ್, ಲಕ್ಷ್ಮೀಪ್ರಭುರಾಜ್, ಶಿವಲಿಂಗಮೂರ್ತಿ ಮತ್ತಿತರರಿದ್ದರು.