ಜಿಲ್ಲೆ

ಅಕ್ಕಮಹಾದೇವಿ ಆದರ್ಶ ಇಂದಿಗೂ ಪ್ರಸ್ತುತ

ಜಿ.ಹೆಚ್. ಧನ್ಯಕುಮಾರ್

ಕಡೂರು: ಆತ್ಮಬಲ ಬೆಳೆಸಿಕೊಂಡರೆ ಏನನ್ನು ಬೇಕಾದರೂ ಸಾಧಿಸ ಬಹುದು ಎನ್ನುವುದನ್ನು ಲೋಕಕ್ಕೆ ತೋರಿಸಿಕೊಟ್ಟ ಧೀಮಂತ ಮಹಿಳೆ ಅಕ್ಕಮಹಾದೇವಿ ಎಂದು ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ವಿದ್ಯಾಧರೆ ಹೇಳಿದರು.

ಪಟ್ಟಣದ ಯಳನಡು ಮಹಾಸಂಸ್ಥಾನ ಮಠದ ಆವರಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಮತ್ತು ಜಿಲ್ಲಾ ಮತ್ತು ತಾಲೂಕು ಕದಳಿ ಮಹಿಳಾ ವೇದಿಕೆ ಆಶ್ರಯದಲ್ಲಿ ನಡೆದ ಅಕ್ಕಮಹಾದೇವಿ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಂಸಾರಿಕ ಬದುಕಿನಲ್ಲಿ ಬಹುತೇಕ ಮಹಿಳೆಯರಿಗೆ ಸ್ವಾತಂತ್ರ್ಯವೆನ್ನುವುದು ಒಂದು ಕನಸು.ಆದರೆ ಆ ಸ್ವಾತಂತ್ರ್ಯವನ್ನು ನಾವೇ ಪಡೆದುಕೊಳ್ಳಬೇಕು. ಅದಾಗಿ ದಕ್ಕುವುದಿಲ್ಲ ಎನ್ನುವ ಧೋರಣೆ ಮಹಾದೇವಿ ಹೊಂದಿದ್ದರು ಎಂದರು.

ಸಾವಿಲ್ಲದ, ಕೇಡಿಲ್ಲದ, ರೂಪಿಲ್ಲದ ಗಂಡವನ್ನು ಬಯಸಿದಳು. ಹಾಗಾಗಿ ಲೌಕಿಕ ಸಂಸಾರವನ್ನು ನಿರಾಕರಿಸಿ ಪಾರಮಾರ್ಥಿಕ ಸಂಸಾರ ಅಪ್ಪಿಕೊಳ್ಳುವಳು ಚೆನ್ನಮಲ್ಲಿಕಾರ್ಜುನನಲ್ಲದೇ ಲೋಕದ ಗಂಡರು ನನಗೆ ನೆನೆಯಲು ಬಾರದು ಎನ್ನುವ ದಿಟ್ಟತನ ತೋರಿದ ಅಕ್ಕಮಹಾದೇವಿ ಸ್ತ್ರೀ ಸ್ವಾತಂತ್ರ್ಯ ಇಲ್ಲದ ಕಾಲಘಟ್ಟದಲ್ಲಿ ಸ್ತ್ರೀ ಸಮಾನತೆಗೆ ಹೋರಾಟ ಮಾಡಿ ಇಂದಿಗೂ ಮಹಿಳೆಯರಿಗೆ ದಾರಿ ದೀಪವಾಗಿದ್ದಾರೆ ಎಂದು ಹೇಳಿದರು.

ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸುಜಾತ ಜಡೆಮಲ್ಲಪ್ಪ ಮಾತನಾಡಿ, ಅಕ್ಕಮಹಾದೇವಿ ಕನ್ನಡದ ಮೊದಲ ಕವಯತ್ರಿ ಅವರು ತೋರಿದ ದಿಟ್ಟ ನಿಲುವು ಇಂದಿನ ಮಹಿಳೆಯರಿಗೆ ಮಾದರಿ. ಮಹಿಳಾ ಇಂದು ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ತನ್ನದೇ ಆದ ಛಾವು ಮೂಡಿಸಲು ಅಕ್ಕಮಹಾದೇವಿ ನಮಗೆ ದಾರಿ ದೀಪವಾಗಿದ್ದಾರೆ ಎಂದು ಹೇಳಿದರು.

ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ, ಗೌರವಾಧ್ಯಕ್ಷ ಕೆ.ಬಿ.ಬಸವರಾಜಪ್ಪ, ಹೋಬಳಿ ಅಧ್ಯಕ್ಷ ಗರ್ಜೆ ರಾಜಣ್ಣ, ವೀರಶೈವ ಲಿಂಗಾಯಿತ ನೌಕರರ ಸಂಘದ ಅಧ್ಯಕ್ಷ ಸಂಪತ್ ಕುಮಾರ್, ಎಸ್. ಮಲ್ಲಿಕಾರ್ಜುನ, ಆಸಂದಿ ಚಂದ್ರಶೇಖರ್, ಭಾನುಪ್ರಕಾಶ, ಉಮಾ ಬಸವರಾಜ್, ವೀಣಾ ಈಶ್ವರಪ್ಪ, ಭುವನ, ಸುನೀತ, ರೇಣುಕಾಂಬಾ ಸರೋಜ, ಕುಂಕಾನಾಡು ಭಾರತಿ ಮತ್ತಿತರಿದ್ದರು.