ಧಾರವಾಡ: ಹೊಸ ಪೀಳಿಗೆಯ ಜನ ಭಾರತೀಯ ಸಂಪ್ರದಾಯ, ನಡೆ- ನುಡಿ ಹಾಗೂ ಭಕ್ತಿ ಮಾರ್ಗದಲ್ಲಿ ನಡೆಯುವ ಅವಶ್ಯಕತೆ ಇದೆ ಎಂದು ಮನೋವೈದ್ಯ ಡಾ. ಆನಂದ ಪಾಂಡುರಂಗಿ ಹೇಳಿದರು.
ನಗರದ ದೇಸಾಯಿ ಗಲ್ಲಿ ವಿಠ್ಠಲ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಅಖಂಡ ಹರಿದಾಸ ಭಜನಾ ಮಹೋತ್ಸ ಉದ್ಘಾಟಿಸಿ ಅವರು ಮಾತನಾಡಿದರು.
ಮೊದಲಿನಿಂದ ಆಚರಣೆಯಲ್ಲಿರುವ ಮಠ- ಮಂದಿರ ಕಾರ್ಯಕ್ರಮಗಳಲ್ಲಿ ಯುವ ಪೀಳಿಗೆಯನ್ನು ತೊಡಗಿಸಿಕೊಳ್ಳಬೇಕು. ನಮ್ಮ ಸಂಪ್ರದಾಯವನ್ನು ಮುಂದುವರಿಸುವ ಪ್ರಯತ್ನ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಪಂ. ಕೆ.ಎಂ. ಕಲಮಂಗಿ ಆಚಾರ್ಯರು ಮಾತನಾಡಿ, ಎಲ್ಲ ಏಕಾದಶಿಗಳಲ್ಲಿ ಆಷಾಢ ಏಕಾದಶಿ ವಿಶಿಷ್ಟವಾದುದು ಎಂದರು.
ಅಖಿಲ ಭಾರತೀಯ ಬ್ರಾಹ್ಮಣ ಸಭಾದ ಉಪಾಧ್ಯಕ್ಷ ಎನ್.ಆರ್. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಪಂ. ಬಂಡಾಚಾರ ಗಿಡದಹುಬ್ಬಳ್ಳಿ ಹಾಗೂ ಅರ್ಚಕ ಎಚ್. ವಾದಿರಾಜಾಚಾರ್ ಪೂಜೆ ಹಾಗೂ ತೊಟ್ಟಿಲು ಸೇವಾ ಕಾರ್ಯಕ್ರಮ ನಡೆಸಿಕೊಟ್ಟರು.
ಡಾ. ಪ್ರಸನ್ನ ಗುಡಿ, ದಯಾನಂದ ಭಟ್, ಭಾರ್ಗವಿ ಕುಲಕರ್ಣಿ ದಾಸವಾಣಿ ಸಂಗೀತ ಸೇವೆ ನಡೆಸಿಕೊಟ್ಟರು. ನಂತರ ವಿವಿಧ ಮಂಡಳಿಗಳಿಂದ ಅಖಂಡ ಭಜನಾರ ಕಾರ್ಯಕ್ರಮ ನಡೆಯಿತು.
ಡಾ. ಶ್ರೀಧರ ಕುಲಕರ್ಣಿ, ಡಾ. ಎಚ್.ಎ. ಕಟ್ಟಿ, ಕೆ.ಆರ್. ದೇಸಾಯಿ, ಎಸ್.ಬಿ. ದ್ವಾರಪಾಲಕ, ರಾಧಾ ಶಾಮರಾವ್, ಇಂದುಮತಿ ರಾಘವೇಂದ್ರ, ಅನುರಾಧಾ ಕುಲಕರ್ಣಿ, ರಮೇಶ ಜಮಾದಾರ, ಇತರರಿದ್ದರು.