ಜಿಲ್ಲೆ

ಅಖಂಡ ಭಾರತ ಸಂಕಲ್ಪ ದಿನ

ಸುನಿಲ್ ಪೊನ್ನೇಟಿ

ಮಡಿಕೇರಿ:

ಯಾವ ದೇಶದ ಇತಿಹಾಸ ಜನರಿಗೆ ಗೊತ್ತಿರುವುದಿಲ್ಲವೋ, ಆ ದೇಶ ಸದೃಢತೆ ಸಾಧಿಸಲು ಸಾಧ್ಯವಿಲ್ಲ ಎಂದು ಹಿಂದೂ ಜಾಗರಣ ವೇದಿಕೆ ಪ್ರಾಂತ ಸಹ ಸಂಯೋಜಕ ಸತೀಶ್ ದಾವಣಗೆರೆ ಹೇಳಿದರು. ಹಿಂದೂ ಜಾಗರಣ ವೇದಿಕೆ ವತಿಯಿಂದ ಶುಕ್ರವಾರ ಸಂಜೆ ಇಲ್ಲಿ ಆಯೋಜಿಸಿದ್ದ ಪಂಜಿನ ಮೆರವಣಿಗೆ ನಂತರ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತದ ಅಖಂಡತೆಗೆ ಧಕ್ಕೆ ಬಂದ ನೈಜ ಇತಿಹಾಸವನ್ನು ಭಾರತೀಯರು ತಿಳಿದುಕೊಳ್ಳಬೇಕು. ದೇಶದ ಭದ್ರತೆಗೆ ಹಿಂದೂ ಸಮಾಜ ಒಂದಾಗಬೇಕು. ಭಯೋತ್ಪಾದನೆ, ದೇಶದ್ರೋಹಿಗಳನ್ನು ಮಟ್ಟ ಹಾಕಲು ಸಂಘಟಿತರಾಗಬೇಕು ಎಂದರು. ವೇದಿಕೆಯ ಪ್ರಾಂತ್ಯ ಕಾರ್ಯಕಾರಿಣಿ ಸದಸ್ಯ ರವಿರಾಜ್‌ಶೆಟ್ಟಿ ಮಾತನಾಡಿ ಸ್ವಾತಂತ್ರ್ಯ ಲಭಿಸಿದ್ದು ಸಾವಿರಾರು ಮಂದಿಯ ಬಲಿದಾನದಿಂದ ಎಂದು ಪ್ರತಿಪಾದಿಸಿದರು.

ಇದಕ್ಕೂ ಮೊದಲು ಹಿಂದೂ ಜಾಗರಣ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಬೃಹತ್ ಪಂಜಿನ ಮೆರವಣಿಗೆ ನಡೆಯಿತು. ಸಂಜೆ ಇಲ್ಲಿನ ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪಂಜುಗಳನ್ನು ಹಿಡಿದು ಹೊರಟ ನೂರಾರ ಕಾರ್ಯಕರ್ತರು ಇಂದಿರಾಗಾಂಧಿ ವೃತ್ತ, ಅಂಚೆ ಕಚೇರಿ, ಜನರಲ್ ತಿಮ್ಮಯ್ಯ ವೃತ್ತ, ದೇವಾಲಯ ರಸ್ತೆ ಮೂಲಕ ಲಕ್ಷ್ಮೀನ ರಸಿಂಹ ಕಲ್ಯಾಣ ಮಂಟಪ ತಲುಪಿದರು.
ವೇದಿಕೆಯ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಭೋಜೇಗೌಡ, ತಾಲೂಕು ಸಂಯೋಜಕ ಮಗೇರನ ಕೆ.ಬೆಳ್ಯಪ್ಪ ಹಾಗೂ ಇತರರು ಇದ್ದರು.

ಸುಮಾರು ೨ ಕಿ.ಮೀ ದೂರದ ಪಂಜಿನ ಮೆರವಣಿಗೆಯಲ್ಲಿ ಸಾವಿರಕ್ಕೂ ಅಧಿಕ ಮಂದಿ ಭಾಗಿಯಾಗಿದ್ದರು. ನಡುನಡುವೆ ಅಲ್ಲಲ್ಲಿ ಜಿಟಿಜಿಟಿಯಾಗಿ ಮಳೆ ಸುರಿಯಿತು. ಅದರ ಮಧ್ಯೆಯೂ ನಗರದಲ್ಲಿ ಕೇಸರಿ ಬಾವುಟಗಳನ್ನು ಹಿಡಿದು ಕಾರ್ಯಕರ್ತರು ಸಾಗಿದರು. ದಾರಿಯುದ್ದಕ್ಕೂ ಪೊಲೀಸರು ಬಿಗಿಭದ್ರತೆ ಕಲ್ಪಿಸಿದ್ದರು. ಕರ್ನಾಟಕ ರಾಜ್ಯ ಮೀಸಲು ಪಡೆಯ ೨ ತುಕಡಿಗಳು, ಡಿಎಆರ್ ಸೇರಿದಂತೆ ಸುಮಾರು ೩೦೦ಕ್ಕೂ ಅಧಿಕ ಮಂದಿ ಪೊಲೀಸರು ಭದ್ರತೆ ಒದಗಿಸಿದ್ದರು.

ಮೆರವಣಿಗೆ ಆರಂಭಕ್ಕೂ ಮುನ್ನ ಇಡೀ ದಿನ ನಗರದೆಲ್ಲೆಡೆ ಪೊಲೀಸರು ಕಣ್ಗಾವಲು ಇರಿಸಿದ್ದರು. ನಗರಕ್ಕೆ ಬರುವ ಎಲ್ಲ ರಸ್ತೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆದು ವಾಹನಗಳನ್ನು ತಪಾಸಣೆ ನಡೆಸಿದರು.