ಜಿಲ್ಲೆ

ಅಖಂಡ ಭಾರತಕ್ಕಾಗಿ ಪಂಜಿನ ಮೆರವಣಿಗೆ

Davangere - Desk - Basavaraja P

ಚನ್ನಗಿರಿಯ ಪ್ರಮುಖ ಬೀದಿಗಳಲ್ಲಿ ಸಂಚಾರ l ಹಿಂದು ಸಂಘಟನೆಗಳ ಪ್ರಮುಖರು ಭಾಗಿ

ಚನ್ನಗಿರಿ: ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಬುಧವಾರ ಪಟ್ಟಣದಲ್ಲಿ ಪಂಚಿನ ಮೆರವಣಿಗೆ ನಡೆಸಿದರು.

ಪಟ್ಟಣದ ಊರಬಾಗಿಲ ಶ್ರೀ ಆಂಜನೇಯ ದೇವಸ್ಥಾನದಿಂದ ಮೆರವಣಿಗೆ ಹೊರಟು ಶಾಂತಯುತವಾಗಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ಬಜರಂಗದಳ ಪ್ರಮುಖ್ ಸಂಚಾಲಕ ಮಂಗಳೂರು ಪುನೀತ್ ಅತಾವರ್ ಮಾತನಾಡಿ, 1947ರ ಆ. 14ರ ಮಧ್ಯರಾತ್ರಿ ನಡೆದ ದೇಶ ವಿಭಜನೆಯ ದುರಂತ ಕಥೆಯನ್ನು ಜನರ ಮುಂದಿಡಲು ಇಂದಿನ ನಮಗಾಗಿ ಅಂದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿ ಹುತಾತ್ಮರಾದವರ ಬಲಿದಾನ ಸ್ಮರಿಸಲಾಗುತ್ತಿದ್ದು, ಈ ಸಲುವಾಗಿ ಹೋರಾಟದ ನೈಜ ಇತಿಹಾಸವನ್ನು ಸಮಾಜದ ಮುಂದಿಡಲು ಸನಾತನ ಧರ್ಮ, ದೇಶ, ಹಿಂದು ಸಮಾಜದ ರಕ್ಷಣೆಗಾಗಿ ಪಣತೊಡಲು ನಿಶ್ಚಯ ಮಾಡುವಂಥ ತ್ರಿಖಂಡವಾಗಿರುವ ಭಾರತ ಮತ್ತೆ ಅಖಂಡವಾಗಬೇಕಿದೆ ಎಂದರು.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೆ ಸಾಕು ಎನ್ನುವಂತಿದ್ದ ಭಾರತೀಯರು ಬಳಿಕ ಅಖಂಡ ಭಾರತ ಉಳಿಸಿಕೊಂಡು ಹೋಗಬಹುದಿತ್ತು. ಅಂದಿನ ನಾಯಕರ ಮಾತುಗಳನ್ನು ಯಾರು ಅಲ್ಲೆಗಳೆಯುತ್ತಿರಲಿಲ್ಲ. ಜನರ ಮುಗ್ದತನ ಬಳಸಿಕೊಂಡು ಇನ್ನೊಬ್ಬರ ಲಾಭಕ್ಕಾಗಿ ಭಾರತವನ್ನು ಮೂರು ಭಾಗವನ್ನಾಗಿ ವಿಭಜಿಸಲಾಯಿತು. ಅಂದು ಮಾಡಿದ ತಪ್ಪುಗಳನ್ನು ಇಂದು ಸರಿಪಡಿಸಬೇಕಾದರೆ ಪ್ರತಿ ಭಾರತೀಯನ ಸಹಕಾರ ಸಂಕಲ್ಪ ಬೇಕಾಗಿದೆ ಎಂದರು.

ಸಂಚಾಲಕ ರವಿಚಂದ್ರ, ವಿಹಿಂಪ ಜಿಲ್ಲಾ ಉಪಾಧ್ಯಕ್ಷ ಕೆ.ಎಚ್.ಮಂಜುನಾಥ್, ಸಂಯೋಜಕ ರಾಜೇಶ್ ಗೌಡ್ರು, ಬಜರಂಗದಳ ಸಂಯೋಜಕ ಶ್ರೀನಿವಾಸ್, ತಾಲೂಕು ಸಹ ಕಾರ್ಯದರ್ಶಿ ಹೇಮಚಂದ್ರ, ವಸಂತ ಇತರರಿದ್ದರು.