ಮಂಗಳೂರು: ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ಅತ್ಯಾಚಾರ, ದರೋಡೆ ಮುಂತಾದ ಪ್ರಕರಣಗಳಲ್ಲಿ ಭಾಗಿಯಾಗಿ 2 ತಿಂಗಳ ಹಿಂದೆ ಜೈಲ್ ನಿಂದ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ಆಕಾಶಭವನ ಶರಣ್ ಯಾನೆ ರೋಹಿದಾಸ್ ಹಾಗೂ ಆತನ ಇತರ 4 ಸಹಚರರನ್ನು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ. ಪ್ರಕರಣದ ವಿವರ
ಮಂಗಳೂರು ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೇಳಾರು ನಂದಿನಿ ಬ್ರಿಡ್ಜ್ ಬಳಿಯಲ್ಲಿ ಡಿ.8 ರಂದು ರಾತ್ರಿ ಸುಮಾರು 11-30 ಗಂಟೆ ಸುಮಾರಿಗೆ ಹಳೆಯಂಗಡಿ ನಿವಾಸಿಯೊಬ್ಬರು ತನ್ನ ದ್ವಿ ಚಕ್ರ ವಾಹನದಲ್ಲಿ ಚೇಳಾರು ನಂದಿನಿ ಬ್ರೀಡ್ಜ್ ಪರಿಸರದಲ್ಲಿ ಹೋಗುತ್ತಿದ್ದ ಸಮಯ ಅಪರಿಚಿತ ವ್ಯಕ್ತಿಗಳಿದ್ದ ಕಾರು ಅವರನ್ನು ಹಿಂಬಾಲಿಸಿ ತಡೆದು ಚಾಕು ತೋರಿಸಿ ಬೆದರಿಸಿ ಮೊಬೈಲ್ ಫೋನ್, 3000 ರೂ. ಹಾಗೂ ದ್ವಿಚಕ್ರ ವಾಹನ ಸುಲಿಗೆ ಮಾಡಿದ್ದು, ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದ ಸಮಯ ಈ ಪ್ರಕರಣದಲ್ಲಿ ಭಾಗಿಯಾದ ಆಕಾಶಭವನ ಶರಣ್ (38), ಅನಿಲ್, ಸೈನಲ್ ಡಿಸೋಜ, ಪ್ರಸಾದ್, ಚೇತನ್ ಕೊಟ್ಟಾರಿ ಎಂಬವರನ್ನು ಬಂಧಿಸಲಾಗಿದೆ.
ಈ ಪೈಕಿ ಆಕಾಶಭವನ ಶರಣ್ ಎಂಬಾತನು ಈ ಪ್ರಕರಣದ ಪ್ರಮುಖ ಸೂತ್ರದಾರಿಯಾಗಿದ್ದು, ಈತನು ಇತ್ತೀಚೆಗೆ ಜೈಲ್ ನಿಂದ ಜಾಮೀನು ಪಡೆದು ಬಿಡುಗಡೆಗೊಂಡವನು ತನ್ನ ಸಹಚರರೊಂದಿಗೆ ಸೇರಿ ಈ ಕೃತ್ಯವನ್ನು ಎಸಗಿರುವುದಾಗಿದೆ. ಈ ಕೃತ್ಯಕ್ಕೆ ಉಪಯೋಗಿಸಿದ ಬಿಳಿ ಬಣ್ಣದ ಮಹೇಂದ್ರ ಎಕ್ಸ್ ಯುವಿ ಕಾರು, 3 ಮೊಬೈಲ್ ಫೋನುಗಳನ್ನು ಸ್ವಾಧೀನಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಸುರತ್ಕಲ್ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ.
ಆಕಾಶಭವನ ಶರಣ್ ತನ್ನ ಸಹಚರರ ಮೂಲಕ ವಿರೋಧಿ ತಂಡದ ವ್ಯಕ್ತಿಯನ್ನು ಕೊಲೆ ಮಾಡಲು ಸಂಚು ರೂಫಿಸುತ್ತಿದ್ದ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿರುತ್ತದೆ.