ಉಡುಪಿ: ಜಿಲ್ಲಾಡಳಿತ, ಜಿ.ಪಂ, ಶಾಲಾ ಶಿಕ್ಷಣ ಇಲಾಖೆ ಹಾಗೂ ಸೈಂಟ್ ಸಿಸಿಲೀಸ್ ಪ್ರೌಢಶಾಲೆ ಆಶ್ರಯದಲ್ಲಿ 14 ರ ವಯೋಮಿತಿಯ ಬಾಲಕ, ಬಾಲಕಿಯರ ರಾಜ್ಯಮಟ್ಟದ ಕ್ರೀಡಾಕೂಟ ನ.1 ರಿಂದ ನ. 3ರವರೆಗೆ ಅಜ್ಜರಕಾಡಿನ ಜಿಲ್ಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
1ರಂದು 3 ಗಂಟೆಗೆ ಉಡುಪಿ ಶೋಕಮಾತ ಇಗರ್ಜಿಯಿಂದ ಕೋರ್ಟ್ ರಸ್ತೆ, ಜೋಡುಕಟ್ಟೆ ಮಾರ್ಗವಾಗಿ ಮೆರವಣಿಗೆಯಲ್ಲಿ ಕ್ರೀಡಾಪಟುಗಳು ಮೈದಾನಕ್ಕೆ ಆಗಮಿಸಲಿದ್ದಾರೆ. ಸಾಯಂಕಾಲ 4.30 ಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಂದನೆ ಸ್ವೀಕರಿಸಲಿದ್ದಾರೆ ಎಂದರು.
ಅಂತರಾಷ್ಟ್ರಿಯ ಕ್ರೀಡಾಪಟು ಮಿಜೋ ಚಾಕೋ, ಶಾಲಾ ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ, ಯುವಜನ ಸೇವೆ, ಕ್ರೀಡಾ ಸಚಿವ ಬಿ.ನಾಗೇಂದ್ರ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಶಿವಮೊಗ್ಗ - ಬೈಂದೂರು ಸಂಸದ ಬಿ.ವೈ ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ್ ಪೂಜಾರಿ, ಎಸ್.ಎಲ್ ಭೋಜೆಗೌಡ, ತೇಜಸ್ವಿನಿ ಗೌಡ, ಮಂಜುನಾಥ್ ಭಂಡಾರಿ, ಶಾಸಕರಾದ ಗುರುರಾಜ್ ಗಂಟಿಹೊಳೆ, ಕಿರಣ್ ಕುಮಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ಸುನೀಲ್ ಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಕ್ರೀಡಾಕೂಟದಲ್ಲಿ 35 ಶೈಕ್ಷಣಿಕ ಜಿಲ್ಲೆಗಳು ಹಾಗು 2 ಕ್ರೀಡಾ ವಸತಿ ಶಾಲೆಗಳಿಂದ 1,800 ವಿದ್ಯಾರ್ಥಿಗಳು, 250 ತಂಡದ ವ್ಯವಸ್ಥಾಪಕರು, 250 ಕ್ರೀಡಾಧಿಕಾರಿಗಳು ಹಾಗು 200 ಸ್ವಯಂ ಸೇವಕರು, ಕ್ರೀಡಾ ಆಯೋಜಕರು ಒಳಗೊಂಡಂತೆ 2,500 ಮಂದಿ ಭಾಗವಹಿಸಲಿದ್ದಾರೆ. ಕ್ರೀಡಾಪಟುಗಳಿಗೆ 17 ಸ್ಥಳಗಳಲ್ಲಿ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬಾಲಕಿಯರು ವಾಸವಿರುವ ಸ್ಥಳಗಳಲ್ಲಿ ಪೋಲಿಸ್ ಭದ್ರತೆಯನ್ನು, ರೋವರ್ ಮತ್ತು ರೇಂರ್ಜಸ್, ಕುಡಿಯುವ ನೀರು, ಪ್ರಥಮ ಚಿಕಿತ್ಸೆ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.
ಇತರೆ ಜಿಲ್ಲೆಗಳಿಂದ ಆಗಮಿಸುವ ಕ್ರೀಡಾಪಟುಗಳಿಗೆ ಸ್ವಾಗತಿಸಲು ಇಂದ್ರಾಳಿಯ ರೈಲು ನಿಲ್ದಾಣ, ಬನ್ನಂಜೆಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಸ್ವಾಗತ ಕೌಂಟರ್ ಗಳನ್ನು ತೆರೆಯಲಾಗುವುದು. ಕ್ರೀಡಾಪಟುಗಳನ್ನು ಕರೆತರಲು ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಜಿಲ್ಲಾಸ್ಪತ್ರೆಯಿಂದ ಪ್ರಥಮ ಚಿಕಿತ್ಸೆ ಘಟಕ, ಆಂಬುಲೆನ್ಸ್ ವ್ಯವಸ್ಥೆ, ಅಗ್ನಿಶಾಮಕ ದಳ ಹಾಗು ಹೆಚ್ಚುವರಿ ಶೌಚಾಲಯ ವ್ಯವಸ್ಥೆಯನ್ನು ಮಾಡಲಾಗಿದೆ. ಗೋವಿಂದ ಕಲ್ಯಾಣ ಮಂಟಪದಲ್ಲಿ ಉಪಹಾರ, ಮಧ್ಯಾಹ್ನ ಊಟ, ರಾತ್ರಿ ಊಟಕ್ಕೆ ಏಕೀಕೃತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಿಡಿಪಿಐ ಗಣಪತಿ, ಸಂಸ್ಥೆಯ ಪಿ.ಟಿ.ಎ ಉಪಾಧ್ಯಕ್ಷ ಸೋಹೆಲ್ ಆಮೀನ್, ಸೈಂಟ್ ಸಿಸಿಲೀಸ್ ಸಂಸ್ಥೆ ಮುಖ್ಯ ಶಿಕ್ಷಕಿ ಪ್ರೀತಿ ಜೆ.ಕ್ರಾಸ್ತಾ, ಸಂಸ್ಥೆಯ ಜಂಟಿ ಕಾರ್ಯದರ್ಶಿ ತೆರೇಸಾ ಜ್ಯೋತಿ, ದೈಹಿಕ ಶಿಕ್ಷಣ ಶಿಕ್ಷಕ ದಿನೇಶ್ ಕುಮಾರ್, ಪ್ರಶಾಂತ್ ಜತ್ತನ್, ನಿರ್ಮಲಾ, ರೀಟಾ ಲೋಬೋ, ಪ್ರಹ್ಲಾದ್ ಬಲ್ಲಾಳ್ ಉಪಸ್ಥಿತರಿದ್ದರು.