ಜಿಲ್ಲೆ

ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಅಗತ್ಯ: ರಾಜೀವ ಶೆಟ್ಟಿ

ಉಡುಪಿ: ವಿದ್ಯಾರ್ಥಿಗಳು ಸೇವಾ ಮನೋಭಾವವನ್ನು ಬೆಳೆಸಿಕೊಂಡು ಸಾರ್ವಜನಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಜೀವನದಲ್ಲಿ ಕಲಿಕೆಯು ಅತ್ಯಂತ ಪ್ರಮುಖ. ಪ್ರತಿ ನಿತ್ಯವೂ ಹೊಸ ವಿಚಾರಗಳನ್ನು ಕಲಿತು ಗುರಿಯತ್ತ ಸಾಗಬೇಕು ಎಂದು ರೆಡ್​ ಕ್ರಾಸ್​ ಸಂಸ್ಥೆಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಹೇಳಿದರು.

ಶುಕ್ರವಾರ ಬ್ರಹ್ಮಗಿರಿಯ ರೆಡ್​ಕ್ರಾಸ್​ ಭವನದಲ್ಲಿ ಮಂಗಳೂರು ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಅಜ್ಜರಕಾಡು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ನಡೆದ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.

ವಿಚಾರ ವಿನಿಮಯ ಜೊತೆಗೆ ಜೀವನದಲ್ಲಿ ಧನಾತ್ಮಕ ಮನೋಭಾವವನ್ನು ಬೆಳಿಸಿಕೊಂಡು ಸಮಾಜಕ್ಕೆ ಕೊಡುಗೆಯನ್ನು ನೀಡುವುದರೊಂದಿಗೆ ಸದೃಢ ರಾಷ್ಟ್ರ ನಿಮಾರ್ಣಕ್ಕೆ ಸಹಕಾರಿಯಾಗಬೇಕು ಎಂದರು.

ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಕಾಲೇಜು ಪ್ರಾಂಶುಪಾಲ ಡಾ. ಭಾಸ್ಕರ ಶೆಟ್ಟಿ ಮಾತನಾಡಿ, ಯುವ ಜನತೆ ಆದರ್ಶ ವ್ಯಕ್ತಿಗಳ ಉನ್ನತ ಮೌಲ್ಯವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಬದ್ಧ್ದತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಪೌರಾಯುಕ್ತ ರಾಯಪ್ಪ ಮಾತನಾಡಿದರು. ಅತಿಥಿಗಳಾಗಿ ನಿಕಟಪೂರ್ವ ರಾಜ್ಯ ಎನ್​ ಎಸ್​.ಎಸ್​ ಸಂಪರ್ಕಾಧಿಕಾರಿ ಡಾ.ಗಣನಾಥ ಶೆಟ್ಟಿ ಎಕ್ಕಾರು, ಭಾರತೀಯ ರೆಡ್​ ಕ್ರಾಸ್​ ಸಂಸ್ಥೆ ಜಿಲ್ಲಾ ಘಟಕದ ಖಜಾಂಜಿ ರಮಾದೇವಿ , ಭಾರತೀಯ ರೆಡ್​ ಕ್ರಾಸ್​ ಸಂಸ್ಥೆಯ ಜಂಟಿ ಖಜಾಂಜಿ ಚಂದ್ರಶೇಖರ್​ , ವಿಜ್ಞಾನ ನಿಕಾಯದ ಡೀನ್​ ಶ್ರೀಧರ್​ ಪ್ರಸಾದ್​ ಕೆ. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ವಾಣಿ ಆರ್​ ಬಲ್ಲಾಳ್​, ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ. ನಿಕೇತನ, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಸಾಫಲ್ಯ ಟ್ರಸ್ಟ್​ ನಿರ್ದೇಶಕಿ ನಿರುಪಮಾ ಪ್ರಸಾದ್​ ಉಪಸ್ಥಿತರಿದ್ದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿದ್ಯಾ ಡಿ. ಸ್ವಾಗತಿಸಿ, ಅಮೃತಾ ಮತ್ತು ಚೈತ್ರಾ ನಿರೂಪಿಸಿ, ಪ್ರೀತಿ ಶೆಟ್ಟಿ ವಂದಿಸಿದರು.