ಜಿಲ್ಲೆ

ಅಜ್ಜಂಪುರ ಪಟ್ಟಣ ಪಂಚಾಯಿತಿ ಗದ್ದುಗೆ ಏರಲು ಜಿದ್ದಾಜಿದ್ದಿ

ತರೀಕೆರೆ: ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿರುವ ಅಜ್ಜಂಪುರ ಪಟ್ಟಣ ಪಂಚಾಯಿತಿ

ಗದ್ದುಗೆ ಏರಲು ಜಿದ್ದಾಜಿದ್ದಿ ಏರ್ಪಟ್ಟಿದ್ದು, ವಿವಿಧ ಪಕ್ಷಗಳಿಂದ 31 ಅಭ್ಯರ್ಥಿಗಳು ಗೆಲುವಿಗಾಗಿ

ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ. ಬಹುತೇಕ ವಾರ್ಡ್‌ಗಳಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ

ನೇರ ಹಣಾಹಣಿ ಏರ್ಪಟ್ಟಿದೆ.

ವೈಯಕ್ತಿಕ ಪ್ರಾಬಲ್ಯದ ಜತೆಗೆ ಕುರುಬ, ಲಿಂಗಾಯತ, ಮುಸ್ಲಿಂ, ಭಾವಸಾರ ಕ್ಷತ್ರಿಯ,

ಮರಾಠ, ಪ.ಜಾ, ಪಪಂ, ದೇವಾಂಗ ಮತ್ತು ಉಪವೀರ ಕೋಮಿನ ಮತಗಳೇ

ನಿರ್ಣಾಯಕವಾಗಿರುವ 11 ವಾರ್ಡ್‌ಗಳಲ್ಲೂ ಕಾಂಗ್ರೆಸ್ ಹಾಗೂ ಬಿಜೆಪಿ ಹುರಿಯಾಳುಗಳನ್ನು

ಸ್ಪರ್ಧೆಗಿಳಿಸಿ ಸಮಬಲದ ಹೋರಾಟ ನಡೆಸಿವೆ. ಟಿಕೆಟ್ ಹಂಚಿಕೆಯಲ್ಲಿ ಉಭಯ ಪಕ್ಷಗಳು

ಮಾಡಿಕೊಂಡಿರುವ ಒಂದಿಷ್ಟು ಎಡವಟ್ಟುಗಳಿಂದ ಉಂಟಾಗಿರುವ ಕಸಿವಿಸಿ ನಡುವೆಯೂ

ಚುನಾವಣಾ ಬಿಸಿ ಕಾವೇರಿದೆ. ಎಲ್ಲ ವಾರ್ಡ್‌ಗಳಲ್ಲೂ ಪ್ರಚಾರ ಕಾರ್ಯ ಚುರುಕುಗೊಳಿಸಿರುವ

ಬಿಜೆಪಿ ಗೆಲುವಿನ ಲೆಕ್ಕಾಚಾರ ತೀವ್ರಗೊಳಿಸಿದೆ. ಅಹಿಂದ ಮತಗಳನ್ನೇ ಅವಲಂಬಿಸಿರುವ

ಕಾಂಗ್ರೆಸ್ ಗ್ಯಾರಂಟಿ ಮಂತ್ರ ಜಪಿಸಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ.

ಸದ್ಯದ ಪರಿಸ್ಥಿತಿಯಲ್ಲಿ 4, 5, 7ನೇ ವಾರ್ಡ್‌ನಲ್ಲಿ ಕಾಂಗ್ರೆಸ್, 1, 6, 9ನೇ

ವಾರ್ಡ್‌ನಲ್ಲಿ ಬಿಜೆಪಿ ಮೇಲುಗೈ ಸಾಧಿಸುವ ಸಾಧ್ಯತೆ ದಟ್ಟವಾಗಿದೆ. 2, 8, 10ರಲ್ಲಿ

ಸಮಬಲದ ಹೋರಾಟ ನಡೆದರೆ 11ನೇ ವಾರ್ಡ್‌ನಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ನೇರ

ಹಣಾಹಣಿ ಇದೆ. 3ನೇ ವಾರ್ಡ್‌ನಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಿಗಿಂತ

ಪಕ್ಷೇತರ ಅಭ್ಯರ್ಥಿಗಳ ಹವಾ ಜೋರಾಗಿದೆ.

ಜನಸೇವೆ, ರಾಜಕೀಯದಲ್ಲಿ ಮುಂದವರಿಯಬೇಕೆಂಬ ಅಭಿಲಾಷೆ, ವಿರೋಧಿಗಳನ್ನು ಯಾವ

ದಾಳ ಉರುಳಿಸಿಯಾದರೂ ಪರಾಭವಗೊಳಿಸಬೇಕೆಂಬ ಹಠಕ್ಕೆ ಬಿದ್ದು ಅಖಾಡಕ್ಕೆ

ಧುಮುಕಿರುವವರ ಭವಿಷ್ಯ ಮತದಾರನ ಕೈಯಲ್ಲಿದೆ. ಈ ಎಲ್ಲ ಕಾತರಕ್ಕೆ ಆ.17ರಂದು

ನಡೆಯಲಿರುವ ಮತದಾನ, 20ರಂದು ಹೊರಬೀಳಲಿರುವ ಲಿತಾಂಶವನ್ನು ಎದುರು

ನೋಡುವಂತಾಗಿದೆ.