ಬೀರೂರಿನ ಅಜ್ಜಂಪುರ ರಸ್ತೆಯಲ್ಲಿ ಕೆರೆಯ ನೀರು ಹೆಚ್ಚಾಗಿ ರಸ್ತೆ ಜಲಾವೃತವಾಗಿದ್ದು ವಾಹನ ಸಂಚಾರಕ್ಕೆ ಹರಸಾಹಸಪಡುತ್ತಿರುವುದು. 
ಜಿಲ್ಲೆ

ಕೆರೆ ಕೋಡಿ ಬಿದ್ದು ಅಜ್ಜಂಪುರ ರಸ್ತೆ ಜಲಾವೃತ

ಜಿ. ಗಜೇಂದ್ರ

ಬೀರೂರು: ಸಮೀಪದ ಗಾಳೀಹಳ್ಳಿ ಕೆರೆ ತುಂಬಿ ಕೋಡಿ ಬಿದ್ದ ಪರಿಣಾಮ ಅಜ್ಜಂಪುರ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ತಾಲೂಕಿನ ಜೀವನಾಡಿ ಮದಗದ ಕೆರೆ ಕಳೆದ 12 ದಿನಗಳಿಂದ ಮೈದುಂಬಿ ಹರಿಯುತ್ತಿದ್ದು ಸರಣಿ ಕೆರೆಗಳಲ್ಲಿ ಗಾಳೀಹಳ್ಳಿ ಕೆರೆಯೂ ಒಂದಾಗಿದೆ. ಗಾಳೀಹಳ್ಳಿ ಕೆರೆ ತುಂಬಿದರೆ ಇಲ್ಲಿಂದ ಕಡೂರಿನ ಕುಂತಿ ಹೊಳೆಗೆ ಹರಿಯುತ್ತದೆ. ಆದರೆ ಭಾರಿ ಮಳೆಯಿಂದ ನೀರಿನ ಹರಿವು ಹೆಚ್ಚಾಗಿದ್ದು ಕಾಲುವೆಗಳನ್ನು ಬಿಟ್ಟು ರಸ್ತೆ, ತೋಟ, ಹೊಲ-ಗದ್ದೆಗಳಲ್ಲದೆ ರಹೀಂ ಸಾಬ್ ಬಡಾವಣೆಯ ಅರ್ಧ ಭಾಗದಲ್ಲಿ ಹರಿಯಲಾರಂಭಿಸಿದೆ. ಇದರ ಮಧ್ಯೆ ವಾಹನ ಸವಾರರು ನೀರಿನಲ್ಲಿ ಸಾಗಲು ಹರಸಾಹಸಪಡಬೇಕಾಯಿತು. ಇದನ್ನು ನೋಡಲು ಪಟ್ಟಣದ ನೂರಾರು ಜನ ಜಮಾಯಿಸಿದ್ದರು. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಂಡರು.
ಅಜ್ಜಂಪುರ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷದಿಂದ ಇದ್ದ ಕಾಲುವೆಗಳನ್ನು ವ್ಯವಸ್ಥಿತಗೊಳಿಸದೆ ಅಲ್ಲಲ್ಲಿ ಮುಚ್ಚಿರುವ ಪರಿಣಾಮ ಇಂದು ಕೆರೆಯ ನೀರು ರಸ್ತೆಯ ಮೇಲೆ ಹರಿಯುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.