ಜಿಲ್ಲೆ

ರಾಜೇಂದ್ರ ಶ್ರೀಗಳು ಕಾಲ,ದೇಶ, ಜಾತಿ, ಧರ್ಮ ಮೀರಿದ ಸಂತ: ಕಲ್ಮಳ್ಳಿ ನಟರಾಜು

ರಾಜೇಂದ್ರ ಶ್ರೀಗಳು ಕಾಲ,ದೇಶ, ಜಾತಿ, ಧರ್ಮ ಮೀರಿದ 20ನೆಯ ಶತಮಾನದ ಸಂತ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಮೈಸೂರು ಜಿಲ್ಲಾ ಘಟಕದ ನಿರ್ದೇಶಕ ಕಲ್ಮಳ್ಳಿ ನಟರಾಜು ಬಣ್ಣಿಸಿದರು.

ಮೈಸೂರು ನಗರದ ವಿವಿಧ ಬಡಾವಣೆಗಳ ವೀರಶೈವ ಲಿಂಗಾಯತ ಒಕ್ಕೂಟದ ವತಿಯಿಂದ ತಮಿಳುನಾಡಿನ ತಾಳವಾಡಿ ತಾಲೂಕು ಮಲ್ಲನ ಗುಳಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ರಾಜೇಂದ್ರ ಶ್ರೀ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜೇಂದ್ರ ಶ್ರೀಗಳು ನೊಂದವರ, ಹಸಿದವರ, ದೀನ ದಲಿತರ ಬದುಕನ್ನು ಉದ್ಧರಿಸಲು ಬಂದ ಮಹಾ ಕಾರಣಿಕ ಪುರುಷ ಎಂದರೆ ತಪ್ಪಾಗಲಾರದು. ಕುಲಕ್ಕೊಬ್ಬ ಶರಣ ಕೋಟಿಗೊಬ್ಬ ಜಂಗಮ ಎನ್ನುವ ಶರಣ ವಾಣಿಯಂತೆ ಪ್ರೀತಿ, ಕರುಣೆಗಳ ಮಾತೃ ಹೃದಯಿಯಾಗಿದ್ದರು ಎಂದರು.

ಪೂಜ್ಯರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಗಮನಾರ್ಹವಾದುದು. ಜನರ ಶೈಕ್ಷಣಿಕ ಅಗತ್ಯವನ್ನು ಪೂರೈಸಲು ಶಿಕ್ಷಣ ಸಂಸ್ಥೆ ಸ್ಥಾಪಿಸಿದರು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿದ್ಯಾರ್ಥಿನಿಲಯ ಸ್ಥಾಪಿಸಿದರು. ಸರಳತೆ, ಮಹಾಮಾನವತಾವಾದಿ ಗುಣ ಬಿಡದೆ ಪಾಲಿಸುತ್ತಾ ಬಂದ ಪೂಜ್ಯರು, ಲೌಕಿಕ ಮತ್ತು ಅಧ್ಯಾತ್ಮ ಬದುಕಿನಲ್ಲಿ ಆದರ್ಶವಿರಬೇಕು, ಪ್ರದರ್ಶನವಿರಬಾರದು ಎಂದು ನಡೆದು ತೋರಿಸಿದವರು. ಚಾಮರಾಜನಗರ ,ಗುಂಡ್ಲುಪೇಟೆ ,ಕೊಳ್ಳೇಗಾಲ, ಹನೂರು ಭಾಗದಲ್ಲಿ ಜಾತಿ, ಧರ್ಮ, ಲಿಂಗ ಭೇದವಿಲ್ಲದೆ ಅತ್ಯಂತ ಕಡು ಬಡವ ಮಕ್ಕಳಿಗೆ ಭಿಕ್ಷೆ ಬೇಡಿ ಹತ್ತಾರು ಅನಾಥಾಲಯಗಳನ್ನು ಸ್ವಾತಂತ್ರ್ಯ ಪೂರ್ವದಲ್ಲಿಯೇ ಆರಂಭಿಸಿದ್ದು ಸಾಮಾನ್ಯ ಜನ ಊಹಿಸಲು ಸಾಧ್ಯವಾಗದು ಎಂದರು.

ರಾಜೇಂದ್ರ ಶ್ರೀಗಳಲ್ಲಿದ್ದ ಸಹನೆ, ಔದಾರ್ಯ ಮತ್ತು ತ್ಯಾಗ ಎಂಬ ಮೂರು ಮುಖ್ಯ ಗುಣಗಳು ಘನೀಕರಿಸಿದ್ದವು. ಈ ಗುಣಗಳಿಂದ ಅವರ ಆಧ್ಯಾತ್ಮಕ ಮತ್ತು ಸಾಮಾಜಿಕ ಸೇವೆ ನಡೆಯುತ್ತಿತ್ತು. ಇಂದು ನಾವೆಲ್ಲರೂ ಈ ಗುಣವನ್ನು ಬದುಕಿನುದ್ದಕ್ಕೂ ಅನುಸರಿಸಿಕೊಂಡು ಬದುಕಬೇಕು ಎಂದರು.

ಒಕ್ಕೂಟದ ಅಧ್ಯಕ್ಷ ದೊರೆಸ್ವಾಮಿ, ಪ್ರಾಧ್ಯಾಪಕ ಕುಮಾರ್ ಬೆಳಲೆ, ಉಪನ್ಯಾಸಕ ಶಿವಕುಮಾರ್, ಶಿಕ್ಷಕ ಸಿದ್ದ ರಮೇಶ್, ಪ್ರಮುಖರಾದ ಡಾ.ಯೋಗೀಶ್, ಮಹದೇವಸ್ವಾಮಿ, ಮಲ್ಲೇಶ್, ನಾಗಣ್ಣ ಇತರರಿದ್ದರು.