ವಿಜಯವಾಣಿ ಸುದ್ದಿಜಾಲ ಕಲಬುರಗಿ
ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದ ಜೇವರ್ಗಿ ಶಾಸಕ ಡಾ.ಅಜಯಸಿಂಗ್ ಧರ್ಮಸಿಂಗ್ ಅವರನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷರನ್ನಾಗಿ ಸರ್ಕಾರ ನೇಮಕ ಮಾಡಿದೆ.
ಅಜಯಸಿಂಗ್ ಅವರು ದೆಹಲಿ ವಿಶೇಷ ಪ್ರತಿನಿಧಿಯಾಗಿ, ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ ಕೆಲಸ ಮಾಡಿದ್ದಾರೆ. ಸಂಪುಟ ದರ್ಜೆ ಸ್ಥಾನ ಮಾನ ಸಹ ನೀಡಲಾಗಿದೆ
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಶಿಫಾರಸ್ಸಿನ ಆದೇಶದಂತೆ ಕೆಕೆಆರ್‌ಡಿಬಿ ಮಂಡಳಿಗೆ ಅಜಯಸಿಂಗ್ ಸೇರಿ ೧೧ ಜನರನ್ನು ಸದಸ್ಯರಾಗಿ ನೇಮಕ ಮಾಡಿ ಗುರುವಾರ ಸಂಜೆ ಯೋಜನೆ ಮತ್ತು ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ನಿರ್ದೇಶಕ ಮತ್ತು ಸರ್ಕಾರದ ಉಪ ಕಾರ್ಯದರ್ಶಿ ಡಿ.ಚಂದ್ರಶೇಖರಯ್ಯ ಅಧಿಕೃತವಾಗಿ ಸರ್ಕಾರಿ ಆದೇಶ ಹೊರಡಿಸಿದ್ದಾರೆ.
ಅಜಯಸಿಂಗ್ ಅವರನ್ನು ಕೆಕೆಅರ್ ಡಿಬಿ ಅದ್ಯಕ್ಷರಾಗಿ ನೇಮಕಗೊಂಡಿರುವುದಕ್ಕೆ ಕಾಂಗ್ರೆಸ್ ಮುಖಂಡರಾದ ಬಸವರಾಜ ಬಿರಾದಾರ ಸೊನ್ನ, ಗುರುಲಿಂಗಪ್ಪಗೌಡ ಆಂದೋಲಾ, ವಿಜಯಕುಮಾರ್ ಪಾಟೀಲ್ ಹಂಗರಗಿ, ಮಲ್ಲಿಕಾರ್ಜುನ ಹಲಕರ್ಟಿ, ಸಕರೆಪ್ಪಗೌಡ ಹರನೂರ ಮೊದಲಾದವರು ಹರ್ಷ ವ್ಯಕ್ತಪಡಿಸಿದ್ದಾರೆ.