ಬೀರೂರು: ಪಟ್ಟಣದ ರೈಲು ನಿಲ್ದಾಣಕ್ಕೆ ಜಿಲ್ಲೆಯಲ್ಲೇ ಪ್ರಮುಖ ಸ್ಥಾನವಿದೆ. ಪ್ರಯಾಣಿಕರು ಹಾಗೂ ವಾಣಿಜ್ಯ ಬಳಕೆ ದೃಷ್ಟಿಯಿಂದ ಪ್ರಾಮುಖ್ಯತೆ ಪಡೆದಿರುವುದರಿಂದ ನಿಲ್ದಾಣದಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ನಾಗರಿಕ ಬಳಕೆದಾರರ ವೇದಿಕೆ ಸದಸ್ಯರು ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ್ಕುಮಾರ್ ಸಿಂಗ್ಗೆ ಮನವಿ ಸಲ್ಲಿಸಿದರು.
ಬೀರೂರು ನಿಲ್ದಾಣಕ್ಕೆ 154 ವರ್ಷಗಳ ಇತಿಹಾಸವಿದೆ. ಪ್ಲಾಟ್ಫಾರಂ ನಡುವಿನ ಲಿಫ್ಟ್ ಅಳವಡಿಕೆ ಕಾಮಗಾರಿ ಮುಕ್ತಾಯವಾಗಬೇಕಿತ್ತು. ಈವರೆಗೂ ಕೆಲಸ ಪೂರ್ಣಗೊಳ್ಳದೆ ಆಮೆ ನಡಿಗೆಯಲ್ಲಿ ಸಾಗಿದೆ. ಇಲಾಖೆ ಸಿಬ್ಬಂದಿಗೆ ನಿರ್ವಣವಾಗಬೇಕಿದ್ದ ವಿಶ್ರಾಂತಿ ಗೃಹದ ಕಾಮಗಾರಿಯೂ ನನೆಗುದಿಗೆ ಬಿದ್ದಿದೆ. ಯಶವಂತಪುರ-ನಿಜಾಮುದ್ದೀನ್, ಮೈಸೂರು-ವಾರಾಣಸಿ, ಬೆಂಗಳೂರು-ಬೆಳಗಾವಿ ಸೇರಿ ಹಲವು ರೈಲುಗಳಿಗೆ ನಿಲುಗಡೆ ಇಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗಿದೆ. ಬೆಳಗಾವಿ-ಮೈಸೂರು, ಮಂಗಳೂರು-ವಿಜಯಪುರ, ಯಶವಂತಪುರ-ವಿಜಯಪುರ ಎಕ್ಸ್ಪ್ರೆಸ್ ರೈಲುಗಳನ್ನು ಪುನರಾರಂಭಿಸಬೇಕು ಎಂದು ಮನವಿ ಮಾಡಿದರು.