ಮೈಸೂರು: ಸಾಮ್ರಾಜ್ಯಶಾಹಿ ಅಮೆರಿಕದ ನೆರವಿನಿಂದ ಇಸ್ರೇಲ್ ನಡೆಸುತ್ತಿರುವ ದಾಳಿ ನಿಲ್ಲಿಸಿ, ಗಾಜಾ ಉಳಿಸಬೇಕು ಎಂದು ಒತ್ತಾಯಿಸಿ ಎಐಯುಟಿಯುಸಿ ಜಿಲ್ಲಾ ಸಮಿತಿಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
ನಗರದ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಮುಖಂಡರು, ಸಾಮ್ರಾಜ್ಯಶಾಹಿ ಅಮೆರಿಕದ ನೆರವಿನೊಂದಿಗೆ ಜಿಯೋನಿಸ್ಟ್ ಇಸ್ರೇಲ್, ಗಾಜಾದ ಆಸ್ತಿತ್ವವನ್ನೇ ನಾಶ ಮಾಡುವಂತಹ ಭೀಕರ ಶಸ್ತ್ರಾಸ್ತ್ರ ದಾಳಿ ನಡೆಸುತ್ತಿದೆ ಎಂದು ದೂರಿದರು.
ಕದನ ವಿರಾಮ ಕೂಡ ಲೆಕ್ಕಿಸದೇ ನಿರಾಶ್ರಿತ ಶಿಬಿರಗಳು, ಆಸ್ಪತ್ರೆಗಳು, ಶೈಕ್ಷಣಿಕ ಸಂಸ್ಥೆಗಳು, ಜನವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಈ ಭೀಕರ ದಾಳಿಯಿಂದಾಗಿ ಸಾವಿರಾರು ಮಂದಿ ಪ್ಯಾಲೆಸ್ತೇನಿ ಮುಗ್ಧ ಮಕ್ಕಳು, ನಾಗರಿಕರು, ಬಡವರು, ಶ್ರಮಿಕರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಇಸ್ರೇಲಿನ ಈ ಪೈಶಾಚಿಕ ದಾಳಿಗೆ, ಮಧ್ಯಪ್ರಾಚ್ಯ ರಾಷ್ಟ್ರಗಳ ಮೇಲೆ ತನ್ನ ಹಿಡಿತ ಸಾಧಿಸಲು ಸರ್ವಪ್ರಯತ್ನ ಮಾಡುತ್ತಿರುವ ಅಮೆರಿಕ, ಶಸ್ತ್ರಾಸ್ತ್ರ ಮತ್ತು ತಂತ್ರಜ್ಞಾನದ ಪೂರೈಕೆಯ ಮೂಲಕ ಸಹಾಯ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ ಎಂದು ಕಿಡಿಕಾರಿದರು.
ಇದು ಕೇವಲ ಇಸ್ರೇಲ್- ಪ್ಯಾಲೆಸ್ತೇನ್ ನಡುವಿನ ಯುದ್ಧಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿನಲ್ಲಿ ನಡೆಯುತ್ತಿರುವ ಬಹುತೇಕ ಎಲ್ಲ ಯುದ್ಧಗಳು ಸಹ ಬಂಡವಾಳಶಾಹಿ ವ್ಯವಸ್ಥೆಯ ಮಾರುಕಟ್ಟೆ ಉಳಿಸುವ, ವಿಸ್ತರಿಸುವ ಪ್ರಯತ್ನಗಳ ಭಾಗವಾಗಿವೆ. ಆದರೆ ಅಂತಿಮವಾಗಿ ನೋವು ಅನುಭವಿಸುವವರು ಆಯಾಯ ದೇಶಗಳ ಬಡಪಾಯಿ ನಾಗರಿಕರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕೂಡಲೇ ವಿಶ್ವದ ಶಾಂತಿ ಕಾಪಾಡುವ ಸಲುವಾಗಿ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಈ ಕೂಡಲೇ ನಿಲ್ಲಿಸಬೇಕು ಹಾಗೂ ಗಾಜಾದಲ್ಲಿ ಶಾಂತಿ ಸ್ಥಾಪಿಸಬೇಕು. ಇದಕ್ಕೆ ವಿಶ್ವಸಂಸ್ಥೆ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದರು.
ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷೆ ಎಂ.ಉಮಾದೇವಿ, ಜಿಲ್ಲಾಧ್ಯಕ್ಷ ಯಶೋಧರಾ, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್ ಮೇಟಿ, ಮುಖಂಡರಾದ ಪಿ.ಎಸ್.ಸಂಧ್ಯಾ, ಮುದ್ದುಕೃಷ್ಣ, ಹರೀಶ್ ಇತರರಿದ್ದರು.