ಮಲ್ಲಿಕಾರ್ಜುನ ಎಚ್.ಟಿ, ಎಐಯುಟಿಯುಸಿ ಜಿಲ್ಲಾಧ್ಯಕ್ಷ  
ಜಿಲ್ಲೆ

ಅಹಮದಾಬಾದ್ ವಿಮಾನ ದುರಂತದ ತನಿಖೆಯಾಗಲಿ, ಎಐಯುಟಿಯುಸಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಚ್.ಟಿ ಆಗ್ರಹ

ವಿಜಯಪುರ: ಅಹಮದಾಬಾದ್ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ಕೈಗೊಳ್ಳಬೇಕು ಹಾಗೂ ವಿಮಾನಯಾನ ಸುರಕ್ಷತೆ ಬಗ್ಗೆ ಗಂಭೀರ ಕ್ರಮ ಕೈಗೊಳ್ಳಲು ಎಐಯುಟಿಯುಸಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಚ್.ಟಿ ಆಗ್ರಹಿಸಿದ್ದಾರೆ.

ಅಹಮದಾಬಾದ್‌ನಲ್ಲಿ ಜರುಗಿದ ವಿಮಾನ ದುರಂತದಲ್ಲಿ ಸುಮಾರು 240 ಜನರು ಮೃತರಾಗಿದ್ದಾರೆ. ಈ ಘಟನೆ ಪ್ರಪಂಚವನ್ನೇ ಬೆಚ್ಚಿ ಬೀಳಿಸಿದೆ. ಈ ಘೋರ ಅವಘಡದ ಬಗ್ಗೆ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ)ಕರ್ನಾಟಕ ರಾಜ್ಯ ಸಮಿತಿಯು ತೀವ್ರ ದಿಗ್ಭ್ರಮೆ ಹಾಗೂ ಆಘಾತವನ್ನು ವ್ಯಕ್ತಪಡಿಸುತ್ತದೆ. ಅವಘಡದಲ್ಲಿ ಮಡಿದವರಿಗೆ ಹೃದಯಪೂರ್ವಕ ಸಂತಾಪ ವ್ಯಕ್ತಪಡಿಸುತ್ತದೆ ಹಾಗೂ ಮಡಿದವರ ಕುಟುಂಬದವರಿಗೆ ಸಾಂತ್ವನ ನೀಡಲು ಬಯಸುತ್ತದೆ ಎಂದು ತಿಳಿಸಿದ್ದಾರೆ.

ಸರ್ಕಾರವು ಕೂಡಲೇ ಮಡಿದ ಕುಟುಂಬದವರಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಗಾಯಗೊಂಡವರಿಗೆ ಸಮರ್ಪಕ ಚಿಕಿತ್ಸೆ ನೀಡಬೇಕು, ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕೆಂದು ಎಐಯುಟಿಯುಸಿ ಆಗ್ರಹಿಸುತ್ತದೆ.

ಈ ದುರಂತದ ಸುತ್ತ, ಮಾನದಂಡಗಳು ಹಾಗೂ ಸುರಕ್ಷತಾ ಮಾರ್ಗ ಸೂಚಿಗಳು ಉಲ್ಲಂಘನೆಯಾಗಿದೆ ಎಂದು ತಜ್ಞರ ಅನಿಸಿಕೆಯಾಗಿದೆ. ಟಾಟಾ ಸಮೂಹ ಹಾಗೂ ಡಿಜಿಸಿಎ ಸಂಸ್ಥೆಗಳನ್ನು ಈ ಅವಘಡಕ್ಕೆ ಜವಾಬ್ದಾರರನ್ನಾಗಿಸಬೇಕು. ಈ ಹಿನ್ನೆಲೆಯಲ್ಲಿ ಈ ದುರ್ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು ಹಾಗೂ ತಪ್ಪಿಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಎಂದು ಅವರು ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.