ಮೈಸೂರು: ‘ಪ್ರತಿ ವರ್ಷ ಮಳೆ ಬಂದಾಗಲೂ ಮನೆಗಳಿಗೆ ನೀರು ನುಗ್ಗುತ್ತದೆ. ಜತೆಯಲ್ಲಿ ಹಾವು, ಚೇಳುಗಳು ಬರುತ್ತವೆ. ಇಡೀ ಬಡಾವಣೆ ಕೆರೆಯಂತಾಗುತ್ತದೆ. ಹೊರಗೆ ಓಡಾಡುವುದು ಅಸಾಧ್ಯ ಎನಿಸಿಸುತ್ತದೆ. ಸೊಳ್ಳೆಕಾಟ ಮಿತಿ ಮೀರುತ್ತಿದೆ. ಕಳೆದ 8 ವರ್ಷಗಳಿಂದಲೂ ಈ ಸಮಸ್ಯೆ ಇದ್ದರೂ ಯಾರೊಬ್ಬರೂ ಶಾಶ್ವತ ಪರಿಹಾರ ನೀಡಿಲ್ಲ. ಏಕಾದರೂ ಮಳೆಗಾಲ ಬರುತ್ತದೆ ಎಂಬ ಚಿಂತೆ ಕಾಡುತ್ತಿದೆ’…
ಕುವೆಂಪುನಗರದ ಆದಿಚುಂಚನಗಿರಿ ರಸ್ತೆಗೆ ಹೊಂದಿಕೊಂಡಿರುವ (ಆರ್‌ಎಂಪಿ ಕ್ವಾಟ್ರರ್ಸ್ ಹಿಂಭಾಗ) ವಾರ್ಡ್ ನಂ.59ರ ವ್ಯಾಪ್ತಿಯ ಐಶ್ವರ್ಯನಗರ ನಿವಾಸಿಗಳಾದ ಪುಟ್ಟೇಗೌಡ ಮತ್ತು ರಾಘವೇಂದ್ರ ಅವರ ಅಂತರಾಳದ ನೋವಿನ ನುಡಿಗಳಿವು.
ಇದು ಕೇವಲ ಪುಟ್ಟೇಗೌಡ ಮತ್ತು ರಾಘವೇಂದ್ರ ಅವರ ಸಂಕಷ್ಟ ಮಾತ್ರವಲ್ಲ, ಐಶ್ವರ್ಯ ನಗರದಲ್ಲಿ ವಾಸಿಸುತ್ತಿರುವ 500ಕ್ಕೂ ಹೆಚ್ಚು ನಾಗರಿಕರ ಸಂಕಟವೂ ಹೌದು. ಇವರೆಲ್ಲರ ನೋವಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿ ತನವೇ ಕಾರಣ.
ಐಶ್ವರ್ಯನಗರ ಅಕ್ಷರಶಃ ಇಲ್ಲಿಯ ನಿವಾಸಿಗಳ ಪಾಲಿಗೆ ದೌರ್ಭಾಗ್ಯ ನಗರವಾಗಿದೆ. 90ಕ್ಕೂ ಹೆಚ್ಚು ನಿವೇಶನಗಳನ್ನೊಳಗೊಂಡ ಐಶ್ವರ್ಯನಗರಕ್ಕೆ ಶುಭ ಸೂಚಕ ಎನ್ನುವ ಮಳೆ ಅಶುಭವಾಗಿದೆ. ಖಾಸಗಿ ಸಂಸ್ಥೆಯಿಂದ ನಿರ್ಮಾಣವಾದ ಐಶ್ವರ್ಯ ನಗರ ಮೈಸೂರು ಮಹಾನಗರ ಪಾಲಿಕೆಗೆ ಹಸ್ತಾಂತರವಾಗಿದೆ. ಆದರೆ ಪ್ರತಿವರ್ಷ ಮಳೆಗಾಲದಲ್ಲಿ ಜಲಾವೃತಗೊಳ್ಳುತ್ತಿರುವ ಬಡಾವಣೆಯನ್ನು ಕಂಡರೂ ಕಾಣದಂತೆ ಇರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಕಾರ್ಯವೈಖರಿ ಕಂಡು, ಕೋಟ್ಯಂತರ ರೂ. ಸಾಲ ಮಾಡಿ ಇಲ್ಲಿ ಮನೆ ಕಟ್ಟಿ ಎಡವಟ್ಟು ಮಾಡಿಕೊಂಡಿದ್ದೇವೆ ಎಂದು ನಿವಾಸಿಗಳು ಪರಿತಪಿಸುತ್ತಿದ್ದಾರೆ.
ಮಳೆಗಾಲದ ಸಂದರ್ಭದಲ್ಲಿ ಇಲ್ಲಿನ ಬಹುತೇಕ ರಸ್ತೆಗಳು ಜಲಾವೃತಗೊಂಡು ಮನೆಗಳಿಗೆ ನೀರು ನುಗ್ಗುತ್ತದೆ. ಕೆಲವು ದಿನಗಳ ಹಿಂದೆ ಸುರಿದ ಮಳೆಯ ಸಂದರ್ಭದಲ್ಲಿ ಬಡಾವಣೆಯ ಬಹುತೇಕ ಭಾಗ ಜಲಾವೃತಗೊಂಡು ಹಲವು ಮನೆಗಳಿಗೆ ನೀರು ನುಗ್ಗಿದ್ದರಿಂದಾಗಿ ಸ್ಥಳೀಯ ನಿವಾಸಿಗಳು ಪರದಾಡಿದರು.
‘ಪ್ರಮುಖವಾಗಿ ಕುಕ್ಕರಹಳ್ಳಿ ಕೆರೆ, ಸರಸ್ವತಿಪುರಂ, ಜಯನಗರ, ಇಸ್ಕಾನ್ ಟೆಂಪಲ್ನಿಂದ ಅರವಿಂದನಗರದ ಕಡೆಗೆ ಸಾಗುವ ದೊಡ್ಡ ಮೋರಿಯನ್ನು ಐಶ್ವರ್ಯ ನಗರದ ಬಳಿ ಅಭಿವೃದ್ಧಿ ಮಾಡದಿರುವುದು ಭಾರಿ ತೊಂದರೆಗೆ ಕಾರಣವಾಗಿದೆ. ಈ ಮೋರಿಯನ್ನು ಪೂರ್ಣಗೊಳಿಸದೆ ಐಶ್ವರ್ಯ ಬಡಾವಣೆ ಬಳಿ ಅರ್ಧಕ್ಕೆ ನಿಲ್ಲಿಸಲಾಗಿದೆ.
ಪರಿಣಾಮ ಕುಕ್ಕರಹಳ್ಳಿ ಕೆರೆಯಿಂದಲೂ ದೊಡ್ಡ ಮೋರಿಯಲ್ಲಿ ಬರುವ ನೀರು ಮುಂದೆ ಹೋಗಲಾಗದೆ ಐಶ್ವರ್ಯನಗರದೊಳಗೆ ನುಗ್ಗುತ್ತಿದೆ. ನೀರಿನ ಜತೆಗೆ ಕಸ, ತ್ಯಾಜ್ಯ ಬಡಾವಣೆಯನ್ನು ಆವರಿಸುತ್ತಿದ್ದು, ನಿವಾಸಿಗಳಿಗೆ ನರಕ ದರ್ಶನ ಮಾಡಿಸುತ್ತಿದೆ. ತಗ್ಗು ಪ್ರದೇಶದಲ್ಲಿರುವ ಐಶ್ವರ್ಯನಗರಕ್ಕೆ ಕುವೆಂಪುನಗರ, ರಾಮಕೃಷ್ಣ ನಗರ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳಿಂದ ಮಳೆ ನೀರು ಹರಿದು ಬರಲಿದ್ದು, ದೊಡ್ಡ ಮೋರಿ ಕಾಮಗಾರಿ ಅಪೂರ್ಣವಾಗಿರುವುದರಿಂದ ಇಡೀ ಐಶ್ವರ್ಯ ನಗರವೇ ಜಲಾವೃತಗೊಳ್ಳಲು ಕಾರಣವಾಗಿದೆ ಎಂದು ಪುಟ್ಟೇಗೌಡ ಮತ್ತು ರಾಘವೇಂದ್ರ ‘ವಿಜಯವಾಣಿ’ಯೊಂದಿಗೆ ದುಃಖ ತೋಡಿಕೊಂಡರು.
ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ನಿರಂತರ ಮನವಿಗಳನ್ನು ಮಾಡುತ್ತಲೇ ಇದ್ದೇವೆ. ಅದರಂತೆ ತಮ್ಮ ಅಧಿಕಾರ ಅವಧಿಯಲ್ಲಿ ಬಂದು ನೋಡುತ್ತಿದ್ದಾರೆಯೇ ಹೊರತು ಸಮಸ್ಯೆ ಬಗೆಹರಿಸುವ ಸಣ್ಣ ಕೆಲಸವೂ ಆಗಿಲ್ಲ. ಬಂದವರು ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸುವುದಾಗಿಯೂ ಹೇಳಿದ್ದಾರೆ. ಆದರೆ, ಅವರೆಲ್ಲರ ಮಾತುಗಳು ಮಾತುಗಳಾಗಿಯೇ ಉಳಿದಿದೆಯೇ ಹೊರತು ಯಾವ ಕೆಲಸವೂ ಆಗಿಲ್ಲ.
ಇಲ್ಲಿನ ಒಂದೊಂದು ಮನೆಯಿಂದಲೂ ಸರ್ಕಾರಕ್ಕೆ ಲಕ್ಷಾಂತರ ರೂ. ವಿವಿಧ ಬಗೆಯ ತೆರಿಗೆ ಕಟ್ಟಿದ್ದೇವೆ. ಹಣ ಕಟ್ಟಿಸಿಕೊಳ್ಳುವವರಿಗೆ ಸಮಸ್ಯೆ ಬಗೆಹರಿಸಿ ಕೊಡಬೇಕು ಎನ್ನುವ ಪರಿಜ್ಞಾನವಿಲ್ಲ. ಜನಪ್ರತಿನಿಧಿಗಳಂತೂ ನಮ್ಮ ಮುಂದೆ ಬಂದು ನಿಂತು ಮಾತನಾಡುವುದಿಲ್ಲ. ಏಕೆಂದರೆ ಅವರಿಗೂ ಇಲ್ಲಿನ ಸಮಸ್ಯೆ ಬಗ್ಗೆ ಗೊತ್ತಿದೆ. ಜನಪರ ಕಾಳಜಿ ಅವರಲ್ಲಿ ಇದ್ದಿದ್ದರೆ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುತ್ತಿದ್ದರು.
ಬಡಾವಣೆ ಸಮಸ್ಯೆ ಬಗ್ಗೆ ದೂರು, ಮನವಿಗಳನ್ನು ಕೊಟ್ಟು ಸಾಕಾಗಿದೆ ಎನ್ನುವ ಐಶ್ವರ್ಯನಗರ ನಿವಾಸಿಗಳು, ಬಡಾವಣೆಯ ಸಮಸ್ಯೆಗೆ ಶಾಶ್ವಯ ಪರಿಹಾರ ಸಿಗುವುದು ಯಾವಾಗ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ದೊಡ್ಡ ಮೋರಿಯ ನಿರ್ಮಾಣದ ಕಾಮಗಾರಿ ಐಶ್ವರ್ಯ ನಗರದ ಸಮೀಪದಲ್ಲಿ ಅರ್ಧಕ್ಕೆ ನಿಲ್ಲಿಸಲಾಗಿದೆ. ಈ ಬಡಾವಣೆಯ ಪಕ್ಕದಲ್ಲೇ ಇರುವ ಖಾಸಗಿ ಜಮೀನಿನ ಮಾಲೀಕ ದೊಡ್ಡ ಮೋರಿ ಹಾದು ಹೋಗುವ ಜಾಗ ನನಗೆ ಸೇರಿದ್ದೆಂದು ಹೇಳುತ್ತಿದ್ದು, ಈ ಕಾರಣಕ್ಕೆ ಮೋರಿ ಕಾಮಗಾರಿ ಪೂರ್ಣಗೊಳಿಸಲು ಅವಕಾಶ ನೀಡಿಲ್ಲ ಎನ್ನಲಾಗಿದೆ. ಈ ವಿಚಾರವಾಗಿ ಜಮೀನು ಮಾಲೀಕ ಕೋರ್ಟ್ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ಜಮೀನು ಮಾಲೀಕ ಹಾಗೂ ಮುಡಾ ನಡುವಿನ ತಿಕ್ಕಾಟದಿಂದ ಐಶ್ವರ್ಯನಗರ ನಿವಾಸಿಗಳು ಕಷ್ಟ ಎದುರಿಸುತ್ತಿದ್ದಾರೆ.
ಐಶ್ವರ್ಯನಗರಕ್ಕೆ ಮೋರಿ ನೀರು ನುಗ್ಗುತ್ತಿರುವುದರಿಂದ ಇಡೀ ಬಡಾವಣೆಯಲ್ಲಿ ಸೊಳ್ಳೆಕಾಟ ಹೆಚ್ಚಾಗಿದೆ. ನೀರಿನ ಜತೆಗೆ ಕಸದ ತ್ಯಾಜ್ಯವೂ ಬಡಾವಣೆಗೆ ನುಗ್ಗುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುವ ಭೀತಿಯೂ ಶುರುವಾಗಿದೆ. ಸೊಳ್ಳೆಯಿಂದ ಬರುವ ಜ್ವರ, ಮಲೇರಿಯಾ, ಡೆಂೆ ಇನ್ನಿತರ ಸಾಂಕ್ರಾಮಿಕ ರೋಗಗಳ ಭಯದಲ್ಲೂ ಸಾರ್ವಜನಿಕರು ಇದ್ದಾರೆ.
ಬಡಾವಣೆಯಲ್ಲಿನ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಇಲ್ಲಿನ ನಿವಾಸಿಗಳು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದ್ದೇವೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ. ದೂರು ನೀಡಿದಾಗ ಬಂದು ನೋಡುತ್ತಿದ್ದಾರೆಯೇ ಹೊರತು ಸಮಸ್ಯೆ ಬಗೆಹರಿಸುವ ಸಣ್ಣ ಕೆಲಸವೂ ಆಗಿಲ್ಲ.-ಪುಟ್ಟೇಗೌಡ, ಐಶ್ವರ್ಯನಗರದ ನಿವಾಸಿ ಮಳೆಗಾಲದ ಸಂದರ್ಭದಲ್ಲಿ ನಮ್ಮ ಬಡಾವಣೆಯ ಬಹುತೇಕ ರಸ್ತೆಗಳು ಜಲಾವೃತಗೊಂಡು ಮನೆಗಳಿಗೆ ನೀರು ನುಗ್ಗುತ್ತದೆ. ಕೆಲವು ದಿನಗಳ ಹಿಂದೆ ಸುರಿದ ಮಳೆಯ ಸಂದರ್ಭದಲ್ಲಿ ಬಡಾವಣೆಯ ಬಹುತೇಕ ಭಾಗ ಜಲಾವೃತಗೊಂಡು, ಹಲವು ಮನೆಗಳಿಗೆ ನೀರು ನುಗ್ಗಿ ಪರದಾಡಿದ್ದೇವೆ. ದಯವಿಟ್ಟು ನಮ್ಮ ಬಡಾವಣೆಯ ಸಮಸ್ಯೆ ಬಗೆಹರಿಸಿ.-ರಾಘವೇಂದ್ರ, ಐಶ್ವರ್ಯನಗರದ ನಿವಾಸಿ ಐಶ್ವರ್ಯನಗರದಲ್ಲಿನ ಸಮಸ್ಯೆ ನನ್ನ ಗಮನಕ್ಕೂ ಬಂದಿದೆ. ಶೀಘ್ರದಲ್ಲೇ ಸಂಬಂಧಪಟ್ಟ ಅಧಿಕಾರಿಗಳ ಜತೆ ಬಡಾವಣೆಗೆ ಭೇಟಿ ನೀಡಿ, ಸಮಸ್ಯೆ ಆಲಿಸುತ್ತೇನೆ. ಜತೆಗೆ ಆದಷ್ಟು ಬೇಗ ಅಲ್ಲಿನ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತೇನೆ.-ಕೆ.ಮರೀಗೌಡ, ಮುಡಾ ಅಧ್ಯಕ್ಷ ಈಗಾಗಲೇ ಒಂದು ಬಾರಿ ಐಶ್ವರ್ಯನಗರಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಆಲಿಸಿದ್ದೇನೆ. ಬಡಾವಣೆ ಪಕ್ಕದಲ್ಲಿ ಖಾಸಗಿಯವರಿಗೆ ಸೇರಿದ ಜಾಗವಿದೆ ಎನ್ನಲಾಗಿದ್ದು, ಮೋರಿ ನಿರ್ಮಿಸಲು ಅಡ್ಡಿಯಾಗಿದೆ. ಮೊದಲು ಜಾಗದ ವಿವಾದವನ್ನು ಇತ್ಯರ್ಥಪಡಿಸಲು ಪ್ರಯತ್ನಿಸುತ್ತೇವೆ. ಬಳಿಕ ಸಮಸ್ಯೆಗೆ ಪರಿಹಾರ ನೀಡಲಾಗುತ್ತದೆ.-ಟಿ.ಎಸ್.ಶ್ರೀವತ್ಸ, ಶಾಸಕ