ಮಂಡ್ಯ: ಲಕ್ಷಾಂತರ ರೂ ಪಡೆದು ವಂಚಿಸಿದ್ದಾರೆನ್ನುವ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆಗೆಂದು ಐಶ್ವರ್ಯಗೌಡ ಹಾಗೂ ಹರೀಶ್ ಗುರುವಾರ ಮಂಡ್ಯ ಸಿಇಎನ್ ಠಾಣೆಗೆ ಹಾಜರಾಗಿ ಅಧಿಕಾರಿಗಳಿಲ್ಲದ ಕಾರಣ ವಾಪಸಾಗಿದ್ದಾರೆ.
ನಗರದ ರವಿಕುಮಾರ್, ಪೂರ್ಣಿಮಾ ಎಂಬುವವರು ಐಶ್ವರ್ಯಗೌಡ ವಿರುದ್ಧ ಪೂರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದು, 55 ಲಕ್ಷ ರೂ ಹಾಗೂ ಚಿನ್ನಾಭರಣ ಪಡೆದು ವಂಚನೆ ಮಾಡಿದ್ದಾರೆಂದು ಆರೋಪಿಸಿದ್ದರು. ಈ ಸಂಬಂಧ ಜ.11ರಂದು ವಿಚಾರಣೆಗೆ ಹಾಜರಾಗುವಂತೆ ಡಿವೈಎಸ್ಪಿ ಜಿ.ಆರ್.ಶಿವಮೂರ್ತಿ ವಾಟ್ಸ್‌ಆ್ಯಪ್ ಹಾಗೂ ಅಂಚೆ ಮೂಲಕ ನೋಟೀಸ್ ಜಾರಿ ಮಾಡಿದ್ದರು. ಆದರೆ ಗುರುವಾರ ಬರುವುದಾಗಿ ಆರೋಪಿಗಳು ತಿಳಿಸಿದ್ದಾರೆನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಐಶ್ವರ್ಯಗೌಡ ವಕೀಲರೊಂದಿಗೆ ಠಾಣೆಗೆ ಆಗಮಿಸಿದ್ದರು. ಆದರೆ ಡಿವೈಎಸ್ಪಿ ಜಿ.ಆರ್.ಶಿವಮೂರ್ತಿ ಚಿಕ್ಕಲ್ಲೂರು ಜಾತ್ರೆಯ ಭದ್ರತೆಗೆಂದು ನಿಯೋಜನೆಗೊಳಿಸಲಾಗಿದೆ. ಆದ್ದರಿಂದ ಠಾಣೆಯಿಂದ ವಾಪಸ್ ತೆರಳಿದ್ದಾರೆ.