ಮಂಗಳೂರು: ಸಚಿವರು, ಶಾಸಕರು, ಅಧಿಕಾರಿಗಳು ಸದಾ ಸಂಚರಿಸುವ ವಿಮಾನ ನಿಲ್ದಾಣ ರಸ್ತೆಯ ಪದವಿನಂಗಡಿ ಬಳಿ ಫುಟ್‌ಪಾತ್‌ನಲ್ಲಿ ಚರಂಡಿ ಗುಂಡಿಗಳು ಬಾಯ್ದೆರೆದು ನಿಂತಿದ್ದು, ಪ್ರಾಣ ಬಲಿಗಾಗಿ ಕಾಯುತ್ತಿವೆ.
ಇಲ್ಲಿನ ಖಾಸಗಿ ಕಾಲೇಜು ಎದುರು ಫುಟ್‌ಪಾತ್ ಕಾಮಗಾರಿ ನಡೆದಿದೆ. ಸಿಮೆಂಟ್ ಸ್ಲಾೃಬ್ ಮತ್ತು ಕಬ್ಬಿಣದ ಮುಚ್ಚಳ ಅಳವಡಿಸುವ ಬಗ್ಗೆ ಇಂಜಿನಿಯರ್ ಹಾಗೂ ವಿನ್ಯಾಸಕಾರರ ನಡುವಿನ ಗೊಂದಲದಿಂದ ಸಾರ್ವಜನಿಕರು ಅಪಾಯ ಎದುರಿಸುವ ಸ್ಥಿತಿ ಇದೆ.
ಪ್ರಸ್ತುತ ಸ್ಲಾೃಬ್ ಮುಚ್ಚದೆ ಇರುವುದರಿಂದ ವಾಹನಗಳು ಒಂದಷ್ಟು ಬದಿಗೆ ಸರಿದರೂ ಗುಂಡಿಗೆ ಬಿದ್ದು ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಸುರಕ್ಷತಾ ಕ್ರಮವಾಗಿ ಬ್ಯಾರಿಕೇಡ್ ಕೂಡಾ ಅಳವಡಿಸದೇ ಇರುವುದು ಪಾಲಿಕೆಯ ಬೇಜಾವಬ್ದಾರಿತನಕ್ಕೆ ಸಾಕ್ಷಿಯಾಗಿದೆ.
ಮಕ್ಕಳು, ಮಹಿಳೆಯರು, ಹಿರಿಯರು ಇಲ್ಲಿ ನಡೆದುಕೊಂಡು ಹೋಗುತ್ತಿದ್ದು, ಬದಿಗೆ ಸರಿದರೆ ಗುಂಡಿಯೊಳಗೆ ಬೀಳುವುದು ನಿಶ್ಚಿತ. ಈ ಪರಿಸರದಲ್ಲಿ ಹಲವು ಮನೆಗಳಿದ್ದು, ಅಲ್ಲಿನ ನಿವಾಸಿಗಳು ಈ ಫುಟ್‌ಪಾತ್ ಹಾದು ಹೋಗಬೇಕಾಗಿದೆ. ರಾತ್ರಿ ವೇಳೆ ಇಲ್ಲಿ ಬೆಳಕಿನ ವ್ಯವಸ್ಥೆಯೂ ಇಲ್ಲದೆ ಇರುವುದರಿಂದ ಪಾದಚಾರಿಗಳಿಗೆ ಕಂಠಕವಾಗಿದೆ.
ಮುಖ್ಯ ರಸ್ತೆಯಿಂದ ಕೇವಲ ಒಂದು ಅಡಿಯ ಅಂತರದಲ್ಲಿ ಈ ಮರಣ ಗುಂಡಿಗಳಿವೆ. ದ್ವಿಚಕ್ರ ವಾಹನಗಳ ಸವಾರರಿಗಂತೂ ಇದು ಮೃತ್ಯು ಕೂಪದಂತಿದೆ. ಈ ಭಾಗದ ಪಾಲಿಕೆ ಸದಸ್ಯರು ಕೂಡ ಗಮನ ವಹಿಸದೆ ಇರುವುದು ದುರಂತ.
(ಕ್ವೋಟ್ಸ್)
ವಿಮಾನ ನಿಲ್ದಾಣ ರಸ್ತೆಯ ಗುರುನಗರ ಕ್ರಾಸ್ ಬಳಿ ಚರಂಡಿ, ಫುಟ್‌ಪಾತ್ ಕಾಮಗಾರಿ ಹೊಸದಾಗಿ ಮಾಡಲಾಗಿದೆ. ಅದರಲ್ಲಿ ಕೆಲವು ಕಡೆ ಸ್ಲಾೃಬ್ ಅಳವಡಿಸಲು ಜಾಗ ಬಿಡಲಾಗಿದೆ. ಅಲ್ಲಿ ಸುರಕ್ಷತೆಗಾಗಿ ಸಿಮೆಂಟ್ ಶೀಟ್‌ಗಳನ್ನು ಇಡಲಾಗಿತ್ತು. ಅದನ್ನು ರಾತ್ರಿ ವೇಳೆ ಯಾರೋ ಕದ್ದೊಯ್ದಿದ್ದಾರೆ. ಅಪಾಯ ಇರುವುದು ನಿಜ. ಶೀಘ್ರದಲ್ಲೇ ಅದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು.
ಜಯಾನಂದ ಅಂಚನ್
ಮನಪಾ ಸದಸ್ಯ ಕದ್ರಿ ಪದವು