ವಿಜಯಪುರ: ರಾಜ್ಯ ಸರ್ಕಾರದಿಂದಲೇ ವಿಮಾನ ನಿಲ್ದಾಣಗಳನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಆರ್ಥಿಕ ಆದಾಯ ಹೆಚ್ಚಿಸಿಕೊಂಡು ಬೊಕ್ಕಸ ತುಂಬಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ರಾಜ್ಯದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಕಾರ್ಯಾಚರಣೆಗೆ ಸಿದ್ದವಾಗಿದ್ದು, ಈ ತಿಂಗಳ 31 ರಿಂದ ವಿಮಾನ ಹಾರಾಟ ಆರಂಭಗೊಳ್ಳಲಿದೆ. ಹಾಸನ ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದೆ ರಾಯಚೂರ ಮತ್ತು ಬಳ್ಳಾರಿಯಲ್ಲೂ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. ಅಷ್ಟೇ ಅಲ್ಲ, ಇನ್ಮುಂದೆ ರಾಜ್ಯದ ವಿಮಾನ ನಿಲ್ದಾಣಗಳನ್ನು ನಮ್ಮ ಸರ್ಕಾರದ ವತಿಯಿಂದಲೇ ಸಮರ್ಥವಾಗಿ ನಿರ್ವಹಿಸಲಾಗುವುದು. ಇದರಿಂದ ಆರ್ಥಿಕ ಆದಾಯ ಮೂಲ ಸೃಷ್ಠಿಯಾಗಿ, ಅದು ನಮ್ಮ ಬೊಕ್ಕಸಕ್ಕೆ ಹರಿದು ಬರಲಿದೆ ಎಂದು ಮಂಗಳವಾರ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗೆ ವೇಗ ಕಲ್ಪಿಸಿ ಮೂಲ ಯೋಜನೆಯಲ್ಲಿ ಇಲ್ಲದ ನೈಟ್ ಲ್ಯಾಂಡಿಂಗ್‌ಗೂ ಅವಕಾಶ ಕಲ್ಪಿಸಲಾಗುವುದು. ಅದಕ್ಕಾಗಿ 50 ಕೋಟಿ ರೂ.ಬಿಡುಗಡೆಗೊಳಿಸಲಾಗಿದೆ. 2024 ಏಪ್ರೀಲ್ ಒಳಗಾಗಿ ಕಾಮಗಾರಿ ಮುಕ್ತಾಯಗೊಳ್ಳಲಿದೆ ಎಂದರು.
ಮೂಲ ಸೌಲಭ್ಯ ಅಭಿವೃದ್ಧಿ, ಕೈಗಾರಿಕೋದ್ಯಮ, ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಠಿ ಇವೆಲ್ಲವೂ ಒಂದು ಸರಪಳಿಯಂತೆ ಕೆಲಸ ಮಾಡುತ್ತಿರುತ್ತೇವೆ. ನಾನು ಈ ಖಾತೆಗಳ ಸಚಿವನಾದ ಮೇಲೆ ಐಫೋನ್ ತಯಾರಿಸುವ ಫಾಕ್ಸ್ ಕಾನ್, ಅದರ ಎಂಡ್ ಅಸೆಂಬ್ಲಿ ಘಟಕಗಳನ್ನು ತಯಾರಿಸುವ ಅದರ ಅಂಗ ಸಂಸ್ಥೆ ಫಾಕ್ಸ್‌ಕಾನ್ ಇಂಟರ್‌ನೆಟ್ ಇಂಡಸ್ಟ್ರೀಸ್, ಅಯಾನ್ - ಲೀಥಿಯಂ ಬ್ಯಾಟರಿಗಳನ್ನು ತಯಾರಿಸುವ ಇಂಟರ್‌ನ್ಯಾಶನಲ್ ಬ್ಯಾಟರಿ ಕಂಪನಿ, ಕೈಗಾರಿಕೆ ಪ್ರದೇಶಗಳನ್ನು ಸ್ವತಃ ನಿರ್ಮಿಸಿ ಹಸ್ತಾಂತರಿಸುವ ಜಪಾನಿನ ಮಾರುಬೇನಿ ಕಾರ್ಪೋರೇಷನ್ ಇವೆಲ್ಲವುಗಳ ಜತೆ ಮಾತುಕತೆ ನಡೆಸಿ ಸಾವಿರಾರು ಕೋಟಿ ರೂ. ಬಂಡವಾಳ ಆಕರ್ಷಿಸಲಾಗುತ್ತಿದೆ. ಇದರ ಜತೆಯಲ್ಲೇ ರಫ್ತು ವಹಿವಾಟಿಗೆ ಉತ್ತೇಜನ ನೀಡುವಂಥ ಹೊಸ ಕೈಗಾರಿಕಾ ನೀತಿ ತರಲು ನಮ್ಮ ಸರ್ಕಾರ ತೀರ್ಮಾನಿಸಿದೆ ಎಂದರು.
ಬೆಂಗಳೂರು ನಮ್ಮ ನಾಡಿನ ರಾಜ್ಯಧಾನಿಯಾಗಿದ್ದು, ಅಲ್ಲಿಯ ಜನಸಂಖ್ಯೆ 1.30 ಕೋಟಿಗಿಂತ ಹೆಚ್ಚಾಗಿದೆ. ಅಲ್ಲಿಯ ಜನರ ಸುಗಮ ಮತ್ತು ತ್ವರಿತ ಒಡಾಟಕ್ಕೆಂದು 15 ಸಾವಿರ ಕೋಟಿ ರೂ.ಗಳಿಗಿಂತಲೂ ಹೆಚ್ಚಿನ ವೆಚ್ಚದಲ್ಲಿ 148 ಕಿಮೀ ಉದ್ದದ ಸಬರ್ಬನ್ ರೈಲು ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದರು.