ಜಿಲ್ಲೆ

ಇನ್ನು ಮುಂದೆ ವಿಮಾನ ನಿಲ್ದಾಣದ ಮಾಹಿತಿ ಕನ್ನಡದಲ್ಲಿ ಲಭ್ಯ; ವೆಬ್‌ಸೈಟ್‌ನಲ್ಲಿ ಸ್ಥಳೀಯ ಭಾಷೆಗೆ ಆದ್ಯತೆ

ಬೆಂಗಳೂರು: ಕನ್ನಡ ಭಾಷೆಗೆ ಆದ್ಯತೆ ನೀಡುವ ಜೊತೆಗೆ ಪ್ರಾದೇಶಿಕ, ಸಾಂಸ್ಕೃತಿಕ ಮೌಲ್ಯ ಎತ್ತಿಹಿಡಿಯುವ ನಿಟ್ಟಿನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ತನ್ನ ಅಧಿಕೃತ ಅಂತರ್ಜಾಲ ತಾಣದಲ್ಲಿ ಕನ್ನಡ ಭಾಷೆಯ ಆಯ್ಕೆಯನ್ನು ಸೇರಿಸಿದೆ. ಕನ್ನಡ ಭಾಷೆಯನ್ನು ಬಳಸುವ ಮೂಲಕ, ಸ್ಥಳೀಯ ಪ್ರಯಾಣಿಕರು ಇನ್ನು ಮುಂದೆ ವಿಮಾನ ನಿಲ್ದಾಣದ ಸೇವೆಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ಸ್ಥಳೀಯ ಭಾಷೆಯಲ್ಲಿ ಸಂವಹನ ನಡೆಸಲು ಆದ್ಯತೆ ನೀಡುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ಅನುಭವವನ್ನು ಹೆಚ್ಚಿಸುವ ಗುರಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿದೆ. ಅಧಿಕೃತ ಅಂತರ್ಜಾಲ ತಾಣದಲ್ಲಿ ಕನ್ನಡ ಭಾಷಾ ಆಯ್ಕೆಯ ಪರಿಚಯವು ವಿಮಾನ ನಿಲ್ದಾಣದಲ್ಲಿ ಕನ್ನಡದ ಪರಿಸರವನ್ನು ವೃದ್ಧಿಸಲಿದೆ. ಈಗಾಗಲೇ ವಿಮಾನ ನಿಲ್ದಾಣದಲ್ಲಿ ಮಾಹಿತಿ ಪ್ರದರ್ಶನ, ಸಾರ್ವಜನಿಕ ಪ್ರಕಟಣೆ, ಅಂಗಡಿ ಮತ್ತು ಮಳಿಗೆಗಳ ನಾಮಫಲಕ ಎಲ್ಲೆಡೆ ಕನ್ನಡ ಕಡ್ಡಾಯಗೊಳಿಸಲಾಗಿತ್ತು.

ಕನ್ನಡ ಬಳಕೆಯ ಉಪಯೋಗಗಗಳು:

* ಕನ್ನಡದಲ್ಲಿ ವಿಮಾನಗಳ ಹಾರಾಟ, ನಿರ್ಗಮನ, ಆಗಮನ ಮತ್ತು ವಿಳಂಬಗಳ ಬಗ್ಗೆ ಮಾಹಿತಿ ಲಭ್ಯ.* ಯಾವುದೇ ಶ್ರಮವಿಲ್ಲದೆ ಪ್ರಯಾಣಿಕರು ಕಾಯ್ದಿರಿಸುವಿಕೆ, ಸಾರಿಗೆ ಆಯ್ಕೆ ಮತ್ತು ವಿಮಾನ ನಿಲ್ದಾಣದ ಸೌಲಭ್ಯಗಳನ್ನು ಅನ್ವೇಷಿಸಬಹುದು. * ಭದ್ರತಾ ಕಾರ್ಯವಿಧಾನ, ಬ್ಯಾಗೇಜ್ ನಿಯಮಗಳು, ಪ್ರಯಾಣಕ್ಕೆ ಬೇಕಾದ ಮಾಹಿತಿ ಸ್ಥಳೀಯ ಭಾಷೆಯಲ್ಲಿ ದೊರೆಯಲಿದೆ."ಸ್ಥಳೀಯ ಭಾಷೆಯಲ್ಲೇ ವಿಮಾನ ನಿಲ್ದಾಣದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲು ಕನ್ನಡ ಭಾಷಾ ಆಯ್ಕೆಯನ್ನು ಪರಿಚಯಿಸುವ ಮೂಲಕ ನಮ್ಮ ಭಾಷಾ ಪರಂಪರೆಯ ಶ್ರೀಮಂತಿಕೆಗೆ ಆದ್ಯತೆ ನೀಡಲಾಗಿದೆ" -ಹರಿ ಮಾರಾರ್, ವಿಮಾನ ನಿಲ್ದಾಣ ಪ್ರಾಧಿಕಾರದ ಎಂ.ಡಿ.