ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಸರಾ ಪ್ರಯುಕ್ತ ನೃತ್ಯರೂಪಕ ಏರ್ಪಡಿಸಲಾಗಿತ್ತು. 
ಜಿಲ್ಲೆ

ವಿಮಾನ ನಿಲ್ದಾಣದಲ್ಲಿ ದಸರಾ ಉತ್ಸವ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವನಹಳ್ಳಿಯಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ವಿಮಾನ ನಿಲ್ದಾಣದ ಟರ್ಮಿನಲ್ 1 ಹಾಗೂ ಟರ್ಮಿನಲ್ 2ರಲ್ಲಿ ದಸರಾ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ನಾಡಿನ ಹೆಮ್ಮೆಯ ಸಂಸ್ಕೃತಿಯನ್ನು ಕಣ್ತುಂಬಿಸಿಕೊಳ್ಳಲು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಸಾಂಸ್ಕೃತಿಕ ಕಲೆಗಳಾದ ಯಕ್ಷಗಾನ, ಕೂಚ್ಚುಪುಡಿ, ಡೊಳ್ಳು ಕುಣಿತ, ತಮಟೆ ವಾದ್ಯ, ನಾಟ್ಯ, ಸಂಗೀತ ಕಛೇರಿ ಸೇರಿ ಅನೇಕ ಕಾರ್ಯಕ್ರಮ ನಡೆಯುತ್ತಿದ್ದು ಈ ಎಲ್ಲಾ ಸಂಭ್ರಮಾಚರಣೆ ಭಾಗವಾಗಿ ಬೆಂಗಳೂರು ವಿಮಾನ ನಿಲ್ದಾಣ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ಅ. 8ರಂದು ಯಕ್ಷಗಾನ, ತಮಟೆವಾದ್ಯಾ ಕಾರ್ಯಕ್ರಮ ಗಮನ ಸೆಳೆಯಿತು. ಜತೆಗೆ ಜಾನಪದ ಗಾಯನ ಮತ್ತು ನೃತ್ಯ ರೂಪಕ, ವಿದ್ವಾನ್ ರೂಪಶ್ರೀ ಮಧುಸೂದನ್ ಅವರಿಂದ ನೃತ್ಯ ಮತ್ತು ಸಂಗೀತ ಕಲಾ ಪ್ರದರ್ಶನ ಜರುಗಿತು. ಅ.9 ರಂದು ಕರ್ನಾಟಕ ಸಂಗೀತ ಹಾಗೂ ನೃತ್ಯ ರೂಪಕ, 10 ರಂದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಕುಚುಪುಡಿ ನೃತ್ಯ ಪ್ರದರ್ಶನ, 11 ರಂದು ಬೊಂಬೆ ಪ್ರದರ್ಶನ ನಡೆಯಲಿದೆ. ಈ ಎಲ್ಲ ಸಾಂಪ್ರದಾಯಕ ಮನರಂಜನೆಯೊಂದಿಗೆ ದಸರಾ ಹಬ್ಬವನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಣ್ತುಂಬಿಕೊಳ್ಳಬಹುದು ಎಂದು ಆಡಳಿತ ಮಂಡಳಿ ತಿಳಿಸಿದೆ.