ವಿಜಯವಾಣಿ ಸುದ್ದಿಜಾಲ ಬೆಂಗಳೂರು
ದೇವನಹಳ್ಳಿ ತಾಲೂಕಿನಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ (ಬಿಐಎಎಲ್) ಅಂಗಸಂಸ್ಥೆಯಾದ ಬೆಂಗಳೂರು ವಿಮಾನ ನಿಲ್ದಾಣ ಸೇವಾ ನಿಯಮಿತ (ಬಿಎಎಸ್‌ಎಲ್) ತಿರುಚಿರಾಪಳ್ಳಿ ವಿಮಾನ ನಿಲ್ದಾಣದಲ್ಲಿ ಹೊಸ ಲೌಂಜ್ ಓವೆಟ್ರಾ ಪ್ರಾರಂಭಿಸುವುದಾಗಿ ಘೋಷಿಸಿದೆ.
ಸೌಕರ್ಯ, ಸಂಸ್ಕೃತಿ ಮತ್ತು ಅನುಕೂಲತೆಯ ಸಮ್ಮಿಶ್ರಣ ಒದಗಿಸುವಂತೆ ವಿನ್ಯಾಸಗೊಳಿಸಲಾದ ಓವೆಟ್ರಾ, ತಿರುಚಿರಾಪಳ್ಳಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲ ಹೆಚ್ಚಿಸಲು ಸಜ್ಜಾಗಿದೆ. ಪ್ರಯಾಣಿಕರು ಪ್ರಯಾಣದ ಮೊದಲು ವಿಶ್ರಾಂತಿ, ಊಟ ಮತ್ತು ಅತ್ಯುತ್ತಮ ಅನುಭವ ಪಡೆಯುವ ವಿಧಾನವನ್ನು ಈ ಸೌಲಭ್ಯ ಒದಗಿಸಲಿದೆ.
ಕಾವೇರಿ ಹರಿವಿನ ಪ್ರತಿಬಿಂಬ:
ತಿರುಚಿರಾಪಳ್ಳಿಯ ಸಾಂಸ್ಕೃತಿಕ ರಚನೆಗೆ ಅನುಗುಣವಾಗಿರುವ ಹೊಸ ಲೌಂಜ್, ಸ್ಥಳೀಯ ಕಲೆ, ವಾಸ್ತುಶಿಲ್ಪ ಮತ್ತು ವಸ್ತುಗಳಿಂದ ಪಡೆದ ವಿನ್ಯಾಸ ಅಂಶಗಳ ಮೂಲಕ ನಗರದ ಗುರುತನ್ನು ಪ್ರತಿಬಿಂಬಿಸುತ್ತದೆ. ಕೋಲಂ ಪ್ರೇರಿತ ಸ್ವಾಗತ ಗೋಡೆಯು ಅತಿಥಿಗಳನ್ನು ಸಂಪ್ರದಾಯಬದ್ಧವಾಗಿ ಸ್ವಾಗತಿಸುತ್ತದೆ. ಮೃದುವಾದ ನೀಲಿ ನೆಲಹಾಸು ಕಾವೇರಿ ನದಿಯ ಹರಿವನ್ನು ಪ್ರತಿಬಿಂಬಿಸುತ್ತದೆ. ಕೈಯಿಂದ ಮಾಡಿದ ಕಬ್ಬಿನ ಮತ್ತು ಬಿದಿರಿನ ಚಿಟೈ ವಿವರಗಳು ಮೇಲ್ಛಾವಣಿಯನ್ನು ಅಲಂಕರಿಸುತ್ತವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ರೋಮಾಂಚಕಾರಿ ಅಧ್ಯಾಯ:
ಬಿಎಎಸ್‌ಎಲ್ ನಲ್ಲಿ ನಮ್ಮ ದೃಷ್ಟಿಕೋನವು ಕೆಲಸಕ್ಕಷ್ಟೆ ಸೀಮಿತವಾಗದೇ, ಆಯಾ ಪ್ರದೇಶದ ಸಂಸ್ಕೃತಿ ಪ್ರತಿಬಿಂಬಿಸುವ ಸ್ಥಳಗಳನ್ನು ಮತ್ತು ಪ್ರಯಾಣದ ಅನುಭವವನ್ನು ಉನ್ನತೀಕರಿಸುವ ವಿಶ್ರಾಂತಿ ಕೊಠಡಿಗಳನ್ನು ರಚಿಸುವುದಾಗಿದೆ ಎಂದು ಬಿಎಎಸ್‌ಎಲ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಾರ್ಜ್ ಕುರುವಿಲ್ಲಾ ಅಭಿಪ್ರಾಯಪಟ್ಟಿದ್ದಾರೆ. ನಾವು ಮೊದಲ ಬಾರಿಗೆ ಬೆಂಗಳೂರಿನಿಂದ ಹೊರಗಡೆ ಈ ದೃಷ್ಟಿಕೋನ ವಿಸ್ತರಿಸುತ್ತಿದ್ದೇವೆ. ಓವೆಟ್ರಾ ಪ್ರಾರಂಭವು ರೋಮಾಂಚಕಾರಿ ಹೊಸ ಅಧ್ಯಾಯವನ್ನು ಗುರುತಿಸುತ್ತದೆ. ಇದು ಚಿಂತನಶೀಲ, ಸಂಸ್ಕೃತಿಯಲ್ಲಿ ಬೇರೂರಿರುವ ಮತ್ತು ದೇಶಾದ್ಯಂತ ಆತಿಥ್ಯದ ಹೊಸ ಮಾನದಂಡ ರೂಪಿಸುವತ್ತ ಒಂದು ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.