ಜಿಲ್ಲೆ

ನ.29ರಂದು ‘ಆ್ಯರೋಕಾನ್-2024’ ಸಮ್ಮೇಳನ


ಮಂಗಳೂರು : ಅಸೋಸಿಯೇಷನ್ ಆಫ್ ರೇಡಿಯೇಷನ್ ಆಂಕಾಲಜಿಸ್ಟ್ ಆಫ್ ಇಂಡಿಯಾದ 44ನೇ ವಾರ್ಷಿಕ ಸಮ್ಮೇಳನ ‘ಆ್ಯರೋಕಾನ್-2024’ ಎಆರ್‌ಒಐಯು ಕೆಎಂಸಿ ಮಂಗಳೂರು ಮತ್ತು ಎಆರ್‌ಒಐ ಕರ್ನಾಟಕ ಘಟಕದ ಸಹಯೋಗದಲ್ಲಿ ನಗರದ ಡಾ. ಟಿಎಂಎ ಪೈ ಇಂಟರ್‌ನ್ಯಾಷನಲ್ ಕನ್‌ವೆನ್ಷನ್ ಸೆಂಟರ್‌ನಲ್ಲಿ ನ.29ರಂದು ಜರಗಲಿದೆ.
ಸಾಯಂಕಾಲ 6ಕ್ಕೆ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದ್ದು ಕೇಂದ್ರ ಸರ್ಕಾರದ ಅಟೋಮಿಕ್ ಎನರ್ಜಿ ರೆಗ್ಯುಲೇಟರಿ ಬೋರ್ಡ್‌ನ ಚೇರ್ಮನ್ ದಿನೇಶ್ ಕುಮಾರ್ ಶುಕ್ಲಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಸಶಸ್ತ್ರಬಲದ ಮೆಡಿಕಲ್ ಸರ್ವೀಸಸ್‌ನ ಡೈರೆಕ್ಟರ್ ಜನರಲ್ ಸರ್ಜನ್ ವೈಸ್ ಆಡ್ಮಿರಲ್ ಡಾ. ಆರ್ತಿ ಸರೀನ್, ಪಿಜಿ ಮೆಡಿಕಲ್ ಎಜುಕೇಷನ್ ಬೋರ್ಡ್ ನ್ಯಾಷನಲ್ ಮೆಡಿಕಲ್ ಕಮಿಷನ್‌ನ ಅಧ್ಯಕ್ಷ ಡಾ. ವಿಜಯ್ ಓಝಾ, ಮಾಹೆ ಕುಲಪತಿ ಲೆ.ಜ.ಡಾ. ಎಂ.ಡಿ.ವೆಂಕಟೇಶ್ ಪಾಲ್ಗೊಳ್ಳಲಿದ್ದಾರೆ ಎಂದು ಕೆಎಂಸಿ ಮಂಗಳೂರಿನ ಡೀನ್ ಡಾ. ಬಿ.ಉಣ್ಣಿಕೃಷ್ಣನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮ್ಮೇಳನದಲ್ಲಿ ರೇಡಿಯೇಷನ್ ಆಂಕಾಲಜಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ದೇಶ ವಿದೇಶಗಳ ಸಾವಿರಾರು ಸಂಶೋಧಕರು, ತಜ್ಞರು ಪಾಲ್ಗೊಳ್ಳಲಿದ್ದಾರೆ. ನ.28ರಂದು ಇಂಡಿಯನ್ ಕಾಲೇಜ್ ಆಫ್ ರೇಡಿಯೇಷನ್ ಆಂಕಾಲಜಿ ವತಿಯಿಂದ ಕಾರ್ಯಾಗಾರ ನಡೆಯಲಿದೆ. ಕ್ಯಾನ್ಸರ್ ಚಿಕಿತ್ಸೆಯಲ್ಲಿ ನಡೆದಿರುವ ಸಂಶೋಧನೆ, ರೋಗಿಗಳ ಆರೈಕೆಯ ಹೊಸ ವಿಧಾನಗಳ ಕುರಿತು ಚರ್ಚೆ, ಪ್ರಸ್ತುತಿ ನಡೆಯಲಿದೆ ಎಂದು ಅವರು ತಿಳಿಸಿದರು.
ಸಮ್ಮೇಳನ ಸಂಘಟನಾ ಮುಖ್ಯಸ್ಥ ಡಾ.ಎಂ.ಎಸ್.ಅತಿಯಾಮಾನ್ ಮಾತನಾಡಿ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಕ್ಯಾನ್ಸರ್ ಕುರಿತಾದ ಜಾಗೃತಿಯಿಂದಾಗಿ ತಪಾಸಣೆ ಮಾಡಿಕೊಳ್ಳುತ್ತಿರುವವರ ಪ್ರಮಾಣ ಹೆಚ್ಚಾಗಿರುವುದು ಕೂಡ ಇದಕ್ಕೆ ಕಾರಣ. ಸಾಮಾನ್ಯವಾಗಿ ಕ್ಯಾನ್ಸರ್‌ನ್ನು ಪ್ರಥಮ ಹಂತದಲ್ಲಿ ಪತ್ತೆ ಹಚ್ಚಿದರೆ ಗುಣಪಡಿಸಬಹುದಾದ ಸಾಧ್ಯತೆ ಶೇ.80ರಿಂದ 85 ಇರುತ್ತದೆ. ನ.29ರಂದು ನಡೆಯಲಿರುವ ಸಮ್ಮೇಳನವು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಜಗತ್ತಿನಾದ್ಯಂತ ನಡೆದಿರುವ ಅತ್ಯಾಧುನಿಕ ಬೆಳವಣಿಗೆಗಳ ಬಗ್ಗೆಯೂ ಬೆಳಕು ಚೆಲ್ಲಲಿದೆ ಎಂದರು. ಡಾ. ದಿಲ್ಸನ್ ಲೋಬೋ ಉಪಸ್ಥಿತರಿದ್ದರು.
.................................