ಕರಡಿ ದಾಳಿಯಿಂದ ಗಾಯಗೊಂಡ ರೈತ ಮಲ್ಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು. 
ಜಿಲ್ಲೆ

ಕರಡಿ ದಾಳಿಯಿಂದ ವಾಯುವಿಹಾರಿಗೆ ಗಾಯ

ಅಭಿನಯ್ ಎಚ್.ಎಂ

ಅರಸೀಕೆರೆ; ತಾಲೂಕಿನ ಸಿದ್ದರಹಳ್ಳಿ ಗ್ರಾಮದಲ್ಲಿ ವ್ಯಕ್ತಿಯ ಮೇಲೆ ಶನಿವಾರ ಮುಂಜಾನೆ ಕರಡಿ ದಾಳಿ ಮಾಡಿ ಗಾಯಗೊಳಿಸಿದೆ.

ಮಲ್ಲಪ್ಪ ಕರಡಿ ದಾಳಿಗೆ ಒಳಗಾದವರು. ಎಂದಿನಂತೆ ಮುಂಜಾನೆ ವಾಕಿಂಗ್ ಮಾಡುತ್ತಿದ್ದ ವೇಳೆ ಕರಡಿ ದಿಢೀರ್ ಮೇಲೆರಗಿದ್ದು ತಲೆ, ಮುಖ, ಬೆನ್ನು ಸೇರಿದಂತೆ ಹಲವೆಡೆ ಮನ ಬಂದಂತೆ ದಾಳಿ ಮಾಡಿದೆ.

ಮಲ್ಲಪ್ಪ ಚೀರಾಟ ಕೇಳಿದ ಸ್ಥಳೀಯರು ಆಗಮಿಸಿ ಕರಡಿಯನ್ನು ಬೆದರಿಸಿ ಓಡಿಸಿದ್ದಾರೆ. ಗಾಯಾಳುವನ್ನು ತಕ್ಷಣವೇ ಅರಸೀಕೆರೆ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

15 ದಿನಗಳ ಹಿಂದೆ ತಾಲೂಕಿನ ಅಗ್ಗುಂದ, ಜನ್ನಾವರ ಗ್ರಾಮದ ರೈತರ ಮೇಲೆ ಕರಡಿ ದಾಳಿ ನಡೆದಿತ್ತು. ಇದೀಗ ಮತ್ತೊಮ್ಮೆ ಪ್ರಕರಣ ಮರುಕಳಿಸಿದ್ದು, ಹಿರೇಕಲ್ ಗುಡ್ಡದ ಸರಹದ್ದಿನಲ್ಲಿರುವ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣವೇ ರೈತರ ನೆರವಿಗೆ ಧಾವಿಸಬೇಕು ಎಂದು ಅಗ್ಗುಂದ, ಸಿದ್ದರಹಳ್ಳಿ, ಶಂಕರನಹಳ್ಳಿ ಬೊಮ್ಮೇನಹಳ್ಳಿ, ಕಾರೆಹಳ್ಳಿ ರೈತರು ಒತ್ತಾಯಿಸಿದ್ದಾರೆ.