ಬೆಂಗಳೂರು: ದೀಪಾವಳಿ ಹಿನ್ನೆಲೆ ಪಟಾಕಿ ಸಿಡಿಸಿ ಜನರು ಸಂಭ್ರಮದ ಮುಗಿಲು ಮುಟ್ಟುತ್ತಿದ್ದು. ರಾಜಧಾನಿಯಲ್ಲಿ ಗಾಳಿ ಗುಣಮಟ್ಟ ಕುಸಿತವಾಗಿದೆ.
ನಿಯಮ ಉಲ್ಲಂಘಿಸಿ ಪಟಾಕಿ ಸಿಡಿತದ ಪರಿಣಾಮ ಬಾಪುಜಿನಗರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಹೆಬ್ಬಾಳ, ಹೊಂಬೇಗೌಡ ನಗರ, ಜಯನಗರ, ಜಿಗಣಿ, ಕಸ್ತೂರಿನಗರ, ಮಲ್ಲಸಂದ್ರ, ಸಾನೇಗುರುವಹಳ್ಳಿ, ಶಿವಪುರ, ಸಿಲ್ಕ್ ಬೋರ್ಡ್ ಮೈಸೂರು ರಸ್ತೆ ಸೇರಿ ನಗರದ ಇತರೆ ಬಡಾವಣೆಗಳು ಅಧಿಕ ಮಲಿನವಾಗಿದೆ. ಪ್ರತಿ ನ ಮೀಟರ್ ಗಾಳಿಯಲ್ಲಿ 2.5 ಮೈಕ್ರಾನ್ ಗಾತ್ರದ ಮಾಲಿನ್ಯಕಾರಕ ಕಣಗಳ ಸಂಖ್ಯೆ ಶೇ.50 ಇದ್ದರೆ, ಗಾಳಿಯ ಗುಣಮಟ್ಟ ಉತ್ತಮವೆಂದು ಕರೆಯಲಾಗುತ್ತದೆ. ಆದರೆ, ಈ ಕಣಗಳ ಸಂಖ್ಯೆ ಹೆಚ್ಚಿದ್ದರೆ ಅಪಾಯಕಾರಿ, 401ರಿಂದ 500ವರೆಗೆ ಕಣಗಳ ಸಂಖ್ಯೆ ಇದ್ದರೆ ಅತಿ ಅಪಾಯಕಾರಿ ಎಂದು ವರ್ಗಿಕರಿಸಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿ ಸೇರಿ ದೇಶದ ವಿವಿಧ ರಾಜ್ಯಗಳಲ್ಲಿ ಗಾಳಿ ಗುಣಮಟ್ಟ ಕಳಪೆ ಹಂತಕ್ಕೆ ತಲುಪಿದೆ. ಆದರೆ, ದೆಹಲಿಯಲ್ಲಿ ಗಾಳಿಯ ಗುಣಮುಟ್ಟ ತೀವ್ರವಾಗಿ ಹದಗೆಟ್ಟಿದೆ. ರಾಜ್ಯದಲ್ಲಿಯೂ ಒಮ್ಮೆ ಕಳಪೆ ಮಟ್ಟಕ್ಕೆ ಹೋದರೂ ಉತ್ತಮ ಮಟ್ಟಕ್ಕೆ ಬಂದಿದೆ. ಧೂಳಿನ ಕಣ, ವಾಹನಗಳಿಂದ ಬಿಡುವ ಹೊಗೆ, ಗಾಳಿಯ ಚಲನೆ ಇಲ್ಲದಿರುವುದು, ಆಟೋಮೊಬೈಲ್, ತೈಲ ಕಾರ್ಖಾನೆಗಳು ಉಗುಳುವ ಹೊಗೆ, ಕೃಷಿ ತ್ಯಾಜ್ಯ ಹಾಗೂ ಮರ ಇದ್ದಿಲು ಸುಡುವಿಕೆಯಿಂದ ವಾಯುಮಾಲಿನ್ಯ ಉಂಟಾಗುತ್ತದೆ. ಕಾರ್ಬನ್ ಮಾನಾಕ್ಸೆಡ್, ನೈಟ್ರೋಜನ್ ಆಕ್ಸೆಡ್,ಸೆಲ್ಫರ್ ಡೈ ಆಕ್ಸೆಡ್ನಂಥ ಹಾನಿಕಾರಕ ಅನಿಲಗಳು ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣಗಳಾಗಿವೆ.
ವಾಯು ಗುಣಮಟ್ಟ ಸೂಚ್ಯಂಕ 400 ದಾಟಿದರೆ ಗಾಳಿಯಲ್ಲಿರುವ ಪಿಎಂ 2.5 ಮಲಿನಕಾರಕರಗಳು ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಪಿಎಂ 2.5 ಅತಿ ಸ್ಮೂ ಮಲಿನಕಾರಕವಾಗಿದ್ದು, ರಕ್ತದಲ್ಲಿ ಸೇರಿಕೊಂಡು ಗಂಭೀರ ಪ್ರಮಾಣದ ಆರೋಗ್ಯ ಸಮಸ್ಯೆಯನ್ನು ಸೃಷ್ಟಿಸಲಿದೆ. ವಿಷಕಾರಿ ಹೊಗೆ ದೇಹಕ್ಕೆ ಸೇರಿ ವಯೋವೃದ್ಧರಿಗೆ,ಮಕ್ಕಳಿಗೆ ಶ್ವಾಸಕೋಶ ಸಮಸ್ಯೆ ಉಂಟಾಗಲಿದೆ.
ನಿಯಮ ಉಲ್ಲಂಘನೆ ಪರಿಣಾಮ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ಪಿಸಿಬಿ) ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅನುಮತಿ ನೀಡಿತ್ತು. ಸುಪ್ರೀಂ ಕೋರ್ಟ್ ಆದೇಶದನ್ವಯ ಅ.31ರಿಂದ ನ.2ರವರೆಗೆ ಪ್ರತಿನಿತ್ಯ ರಾತ್ರಿ 8 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಪಟಾಕಿ ಸಿಡಿಸಲು ಅವಕಾಶ ನೀಡಲಾಗಿದೆ. ಪಟಾಕಿಗಳ ಮಾರಾಟ ಮತ್ತು ಬಳಕೆ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಸ್ಪಷ್ಟ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಗದಿಪಡಿಸಿದ ಸಮಯದಲ್ಲೇ ಪಟಾಕಿ ಸಿಡಿಸಬೇಕು. ಉಳಿದ ಸಮಯದಲ್ಲಿ ನಿಷೇಧಿಸಲಾಗಿದೆ ಎಂದು ಬಿಬಿಎಂಪಿ ಹೇಳಿತ್ತು. ನಿಯಮ ಉಲ್ಲಂಘಿಸಿ ಪಟಾಕಿ ಸಿಡಿಸಿದ ಪರಿಣಾಮ ಗುರುವಾರದಿಂಧ ಗಾಳಿ ಗುಣಮಟ್ಟ ಸೂಚ್ಯಂಕ 100ರ ಗಡಿ ದಾಟಿದೆ. ತಿಂಗಳಿಂದ ಮಾಲಿನ್ಯ ಪ್ರಮಾಣ ಕಡಿಮೆ ಇತ್ತು. ದೀಪಾವಳಿ ಪ್ರಯುಕ್ತ ಪಟಾಕಿ ಸಿಡಿಸುತ್ತಿರುವ ಹಿನ್ನೆಲೆಯಲ್ಲಿ ಮಾಲಿನ್ಯ ಹೆಚ್ಚಳಕ್ಕೆ ಕಾರಣವಾಗಿದೆ.