ಮಂಡ್ಯ: ಸಣ್ಣಪುಟ್ಟ ಓಡಾಟಕ್ಕೂ ವಾಹನ ಬಳಸುವುದನ್ನು ನಿಲ್ಲಿಸಿ. ಸಮೂಹ ಸಾರಿಗೆಗಳನ್ನು ಬಳಸುವುದರಿಂದ ಅನಗತ್ಯ ವೆಚ್ಚ ತಗ್ಗಿಸಿದಾಗ ವಾಯುಮಾಲಿನ್ಯ ತಡೆಗಟ್ಟಬಹುದು ಎಂದು ಪ್ರಾದೇಶಿಕ ಸಾರಿಗೆ ಕಚೇರಿ ಅಧೀಕ್ಷಕ ಎಂಜಿಎನ್ ಪ್ರಸಾದ್ ಕಿವಿಮಾತು ಹೇಳಿದರು.
ತಾಲೂಕಿನ ಚಿಕ್ಕಮಂಡ್ಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ, ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಮಂಗಲ, ಸರ್ಕಾರಿ ಪ್ರೌಢಶಾಲೆ ಚಿಕ್ಕಮಂಡ್ಯ ಸಹಯೋಗದೊಂದಿಗೆ ಆಯೋಜಿಸಿದ್ದ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಭವಿಷ್ಯದಲ್ಲಿ ಎಲೆಕ್ಟ್ರಿಕಲ್ ಬಸ್, ವಾಹನ ಬರಲಿವೆ. ಮುಂದಿನ ದಿನಗಳಲ್ಲಿ ದೊಡ್ಡ ದೊಡ್ಡ ಮಹಾನಗರಗಳಲ್ಲಿ ಟ್ರಿಣ್ ಟ್ರಿಣ್ ವ್ಯವಸ್ಥೆ ಅನಿವಾರ್ಯವಾಗುತ್ತದೆ ಎಂದು ಹೇಳಿದರು.
ಕೃಷಿ ತ್ಯಾಜ್ಯಗಳನ್ನು ಸುಡುತ್ತಿರುವುದರಿಂದ ದೆಹಲಿಯಂತಹ ನಗರಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ವಾಯು ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ವಿದ್ಯಾರ್ಥಿಗಳು ಮಾಲಿನ್ಯದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಾದ ಅಗತ್ಯವಿದ್ದು, ತಮ್ಮ ಮನೆಯಿಂದಲೇ ಈ ಮಾಲಿನ್ಯದಿಂದ ಆಗುವ ದುಷ್ಪರಿಣಾಮಗಳನ್ನು ಸಮರ್ಪಕವಾಗಿ ತಿಳಿಸಿದಲ್ಲಿ ಎಲ್ಲರಲ್ಲೂ ಇದರ ಬಗ್ಗೆ ಜಾಗೃತಿ ಮೂಡುತ್ತದೆ. ಸಾರಿಗೆ ಇಲಾಖೆ ವತಿಯಿಂದ ಪ್ರತಿ ವರ್ಷ ನವಂಬರ್ ಮಾಹೆಯಲ್ಲಿ ವಾಯು ಮಾಲಿನ್ಯ ನಿಯಂತ್ರಣಾ ಮಾಸಾಚರಣೆ ಆಚರಿಸಲಾಗುತ್ತದೆ ಎಂದರು.
ಮೈಸೂರಿನ ನಟರಾಜ ಮಹಿಳಾ ಪ್ರಥಮ ದರ್ಜೆ ಕಾಲೇಜು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಎಚ್.ಎ.ಪೂರ್ಣಿಮಾ ಮಾತನಾಡಿ, ವಾಯು ಮಾಲಿನ್ಯದ ಕಾರಣದಿಂದ ಓಜೋನ್ ಪದರವು ಕ್ಷೀಣಿಸುತ್ತಿದೆ. ಮಾನವನ ಆರೋಗ್ಯವಷ್ಟೇ ಅಲ್ಲದೇ ಭೂಮಿಯ ಪರಿಸರ ವ್ಯವಸ್ಥೆಗಳು ಒಂದು ಅಪಾಯವಾಗಿ ಪರಿಣಮಿಸುತ್ತದೆ. ವಾಯು ಮಾಲಿನ್ಯ ಕೇವಲ ವಾಹನಗಳಿಂದ ಮಾತ್ರವಲ್ಲ, ಮನೆಗಳಲ್ಲಿರುವ ತಂಗಳು ಪೆಟ್ಟಿಗೆಯಿಂದ ವಾತಾವರಣ ಕಲುಷಿತವಾಗುತ್ತಿದೆ. ಮನೆಯ ಸುತ್ತಮುತ್ತಲಿನ ವಾತಾವರಣ ಶುದ್ಧವಾಗಿರಬೇಕು ಎಂದು ಹೇಳಿದರು.
ಪರಿಸರ ರೂರಲ್ ಡೆವೆಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ, ಮನುಕುಲದ ಒಳಿತಿಗೆ ಪರಿಸರ ಸಮತೋಲನದಿಂದ ಇಟ್ಟುಕೊಳ್ಳಬೇಕು.ಈ ನಿಟ್ಟಿನಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಒತ್ತು ಕೊಡಬೇಕು ಎಂದರು.
ಮಂಡ್ಯ ಪ್ರಾದೇಶಿಕ ಸಾರಿಗೆ ಕಚೇರಿ ಹಿರಿಯ ಮೋಟಾರು ವಾಹನ ನಿರೀಕ್ಷಕ ಜೆ.ಪಿ.ಪ್ರಕಾಶ್, ಚಿಕ್ಕಮಂಡ್ಯ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಚ್.ಎನ್.ದೇವರಾಜು, ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್, ಪರಿಸರ ರಮೇಶ್, ಕಲ್ಕುಣಿ ಲೋಕೇಶ್ ಇತರರಿದ್ದರು. ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ಕುರಿತು ಚಿಕ್ಕಮಂಡ್ಯ ಗ್ರಾಮದಲ್ಲಿ ಸೈಕಲ್ ಜಾಥಾ ನಡೆಸಿ ಜಾಗೃತಿ ಮೂಡಿಸಿದರು.