ಜಿಲ್ಲೆ

ರಕ್ಷಣಾ ಇಲಾಖೆಗೆ ನಾಲ್ಕೂರಿನಲ್ಲಿ 6 ಎಕ್ರೆ ಜಾಗ ಮಂಜೂರು

ಗೋಪಾಲಕೃಷ್ಣ ಪಾದೂರ್

ಉಡುಪಿ: ಭಾರತೀಯ ರಕ್ಷಣಾ ಇಲಾಖೆಗೆ ಜಾಗ ಹಂಚಿಕೆ ಬಗ್ಗೆ ವಾಯುಪಡೆಯ ಏರ್​ ಮಾರ್ಷಲ್​ ಮಣಿಕಂಠ ಅವರು ಮಂಗಳವಾರ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅವರನ್ನು ಭೇಟಿ ಮಾಡಿ, ಚರ್ಚಿಸಿದರು.

ರಕ್ಷಣಾ ಇಲಾಖೆ ಅಧೀನದಲ್ಲಿದ್ದ ಆದಿಉಡುಪಿಯ ಹೆಲಿಪ್ಯಾಡ್​ನ 6 ಎಕ್ರೆ ಜಾಗವನ್ನು 2019ರಲ್ಲಿ ಜಿಲ್ಲಾಡಳಿತ ವಾಪಾಸು ಪಡೆದಿದ್ದು, ನಗರದ ಹೃದಯಭಾಗದಲ್ಲಿರುವ ಹೆಲಿಪ್ಯಾಡ್​ ಗಣ್ಯರ ಓಡಾಟಕ್ಕೆ ಅತೀ ಅಗತ್ಯವಾಗಿರುವುದರಿಂದ ಇದಕ್ಕೆ ಪರ್ಯಾಯವಾಗಿ ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮದಲ್ಲಿ ಸರ್ಕಾರಿ ಜಾಗ ಮಂಜೂರುಗೊಳಿಸಿತ್ತು. ಸ್ಥಳಕ್ಕೆ ಭೇಟಿ ನೀಡಿದ ಏರ್​ ಮಾರ್ಷಲ್​ ಮಣಿಕಂಠ ಅವರು ಖುದ್ದು ಪರಿಶೀಲನೆ ನಡೆಸಿದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಿಕ್​ ಬಾಯಲ್​, ಜಿಲ್ಲಾ ಪೊಲೀಸ್​ ಅಧೀಕ್ಷಕ ಡಾ. ಅರುಣ್​ ಕೆ., ವಾಯುಪಡೆಯ ಆಡಳಿತಾಧಿಕಾರಿ ಪಿ.ಎ ಶೈಲೇಶ್​ ಕುಮಾರ್​, ತಹಶೀಲ್ದಾರ್​ ಶ್ರೀಕಾಂತ್​ ಎಸ್​. ಹೆಗಡೆ ಉಪಸ್ಥಿತರಿದ್ದರು.