ಜಿಲ್ಲೆ

ಕೊಡವರ ಸಂಸ್ಕೃತಿಯ ಪ್ರತೀಕವೇ ಐನ್‌ಮನೆ: ಬಾಚರಣಿಯಂಡ ಪಿ.ಅಪ್ಪಣ್ಣ

ಮಡಿಕೇರಿ: ಸುಸಂಸ್ಕೃತ ಕೊಡವ ಜನಾಂಗಕ್ಕೆ ಜೀವನಾದರ್ಶ ಮತ್ತು ಸಂಸ್ಕೃತಿಯ ಪ್ರತೀಕವಾಗಿರುವ ಐನ್‌ಮನೆಯೇ ಆಧಾರ ಸ್ತಂಭವಾಗಿದೆ. ಕೊಡಗಿನ ಐನ್‌ಮನೆಗಳು ಚೇತರಿಸಿಕೊಳ್ಳುವ ಅಗತ್ಯವಿದೆ ಎಂದು ಹಿರಿಯ ಸಾಹಿತಿ ಬಾಚರಣಿಯಂಡ ಪಿ.ಅಪ್ಪಣ್ಣ ತಿಳಿಸಿದರು.


ನಗರದ ಪತ್ರಿಕಾ ಭವನದಲ್ಲಿ ಕೊಡವ ಮಕ್ಕಡ ಕೂಟ ಪ್ರಕಟಿಸಿದ ೭೭ನೇ ಪುಸ್ತಕ ಹಾಗೂ ಲೇಖಕಿ ಐಚಂಡ ರಶ್ಮಿ ಮೇದಪ್ಪ ಅವರು ಬರೆದಿರುವ ೨ನೇ ಪುಸ್ತಕ ಸಾಂಸ್ಕೃತಿಕ ಪಿಂಞ ಧಾರ್ಮಿಕ ಹಿನ್ನಲೆಲ್ ಕೊಡವಡ ಐನ್‌ಮನೆ ಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.


ಐನ್‌ಮನೆಗಳು ಕೊಡವರ ಜೀವನಾದರ್ಶ, ಸಂಸ್ಕೃತಿ, ಸಭ್ಯತೆಗಳ ಪ್ರತೀಕವಾಗಿದೆ. ವಂಶದ ಮೂಲ ಕಾರಣ ಪುರುಷರನ್ನು ಇಲ್ಲಿ ನೆಲೆಗೊಳಿಸಿ ಪೂಜಿಸುವುದರಿಂದ ಈ ಮನೆಗೆ ಪೂಜನೀಯ ಸ್ಥಾನಮಾನವಿದೆ. ಕೊಡವ ಜನಾಂಗದ ಸಂಸ್ಕೃತಿಗೆ ಜೀವ ತುಂಬಿರುವ ಐನ್‌ಮನೆಯ ಕುರಿತು ಪುಸ್ತಕ ರಚಿಸಿರುವುದು ಶ್ಲಾಘನೀಯವೆಂದರು.


ಐನ್‌ಮನೆಯಲ್ಲಿ ಕಲಾತ್ಮಕತೆ ಇದೆ. ಕೊಡವ ಸಂಸ್ಕೃತಿಯ ಜೀವವಿದೆ. ಕೊಡವ ಜನಾಂಗದ ಜೀವಮಾನ ಅಡಗಿದೆ. ಈ ಪೂಜನೀಯ ಮತ್ತು ಭಾವನೀಯ ಐನ್‌ಮನೆಯನ್ನು ಉಳಿಸಿಕೊಂಡು ಹೋಗುವ ದೊಡ್ಡ ಜವಾಬ್ದಾರಿ ಎಲ್ಲರ ಮೇಲಿದೆ. ರಶ್ಮಿ ಮೇದಪ್ಪ ಅವರು ಐನ್‌ಮನೆ ಕುರಿತು ಬರೆದಿರುವ ಪುಸ್ತಕ ಅಧ್ಯಯನಶೀಲವಾಗಿದ್ದು, ಪ್ರತಿಯೊಬ್ಬ ಕೊಡವರ ಮನೆಯಲ್ಲಿ ಸಂಗ್ರಹಕ್ಕೆ ಯೋಗ್ಯವಾಗಿದೆ. ಕೊಡವ ಸಂಸ್ಕೃತಿ ಹೇಗೆ ಲೋಕ ಪ್ರಸಿದ್ಧವಾಯಿತು ಎಂಬುವುದನ್ನು ಲೇಖಕಿ ಆಳವಾಗಿ ಅಧ್ಯಯನ ಮಾಡಿದ್ದಾರೆ. ಬಹಳ ಉತ್ತಮವಾದ ಬರವಣಿಗೆ, ಭಾಷಾ ಕೌಶಲ್ಯ ಮತ್ತು ಕುಟುಂಬಗಳ ಪೂರ್ವ ಇತಿಹಾಸ, ಸಂಸ್ಕೃತಿ ಇದರಲ್ಲಿ ಅಡಕವಾಗಿದ್ದು, ಯುಗ ಯುಗಾಂತರ ಕೊಂಡೊಯ್ಯುವ ಪುಸ್ತಕ ಇದಾಗಿದೆ ಎಂದು ವಿವರಿಸಿದರು.


ಯುವ ಸಾಹಿತಿಗಳನ್ನು ಪ್ರೋತ್ಸಾಹಿಸುವ ಮೂಲಕ ಅಲ್ಪಾವಧಿಯಲ್ಲಿ ದಾಖಲೆಯ ೭೭ ಪುಸ್ತಕಗಳನ್ನು ಓದುಗರಿಗೆ ನೀಡಿರುವ ಕೊಡವ ಮಕ್ಕಡ ಕೂಟದ ಸ್ಥಾಪಕಾಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರ ಕಾರ್ಯ ಮಾದರಿಯಾಗಿದೆ ಎಂದು ಬಾಚರಣಿಯಂಡ ಪಿ.ಅಪ್ಪಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.


ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ ಮಾತನಾಡಿ, ಕೊಡವ ಜನಾಂಗಕ್ಕೆ ಉತ್ತಮ ಸ್ಥಾನಮಾನವನ್ನು ದೊರೆಕಿಸಿಕೊಟ್ಟಿರುವುದು ಐನ್‌ಮನೆಗಳು. ಬಹಳ ಹಿಂದಿನಿಂದಲೂ ಕೊಡವ ಜನಾಂಗದ ಯಾವುದೇ ಶುಭ ಸಮಾಂಭಗಳನ್ನು ಐನ್‌ಮನೆಯಲ್ಲಿ ಆಚರಿಸುವ ಪದ್ಧತಿ ಇತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಐನ್‌ಮನೆಯಲ್ಲಿ ಯಾರೂ ವಾಸವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಡವ ಸಂಸ್ಕೃತಿ, ಆಚಾರ ವಿಚಾರವನ್ನು ಜನಾಂಗ ಬಾಂಧವರು ಉಳಿಸಿ, ಬೆಳೆಸಿಕೊಂಡು ಹೋಗುವುದರ ಜತೆಗೆ ಮುಂದಿನ ಪೀಳಿಗೆಗೂ ಪರಿಚಯಯಿಸುವ ಕಾರ್ಯ ಆಗಬೇಕು ಎಂದರು.


ಮಡಿಕೇರಿ ಕೊಡವ ಸಮಾಜದಲ್ಲಿ ಗ್ರಂಥಾಲಯವನ್ನು ರೂಪಿಸಿ ಪುಸ್ತಕವನ್ನು ಇಡುವ ಗುರಿ ಹೊಂದಲಾಗಿದೆ. ಜನಾಂಗ ಬಾಂಧವರು ಬರೆದು ಬಿಡುಗಡೆಗೊಳಿಸಿದ ೧೨೮ ಪುಸ್ತಕಗಳನ್ನು ಈಗಾಗಲೇ ಸಂಗ್ರಹಿಸಿಡಲಾಗಿದ್ದು, ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ಮುತ್ತಪ್ಪ ಹೇಳಿದರು.


ಸುಬ್ರಹ್ಮಣ್ಯ ಕೇರಿ ಅಧ್ಯಕ್ಷ ನಾಳೆಯಂಡ ನಾಣಯ್ಯ ಮಾತನಾಡಿ, ಐನ್‌ಮನೆ ಕೊಡವ ಕುಟುಂಬದ ದೈವ ನೆಲೆಯಾಗಿದ್ದು, ಅದನ್ನು ದೇವಾಲಯದಂತೆ ಪೂಜಿಸಲಾಗುತ್ತದೆ. ಜನಾಂಗ ಬಾಂಧವರು ಕೊಡವಾಮೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು.


ಪುಸ್ತಕ ಬರಹಗಾರ್ತಿ ಐಚಂಡ ರಶ್ಮಿ ಮೇದಪ್ಪ ಮಾತನಾಡಿ, ಈ ಪುಸ್ತಕ ತಾನು ಬರೆದಿರುವ ಎರಡನೇಯ ಪುಸ್ತಕವಾಗಿದ್ದು, ಇದು ಎಂ.ಎ ಕೊಡವ ಪದವಿಗಾಗಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಅಧ್ಯಯನದ ಪ್ರಬಂಧ ಪುಸ್ತಕವಾಗಿದೆ. ಮಾರ್ಗದರ್ಶಕರಾದ ಬಾಚರಣಿಯಂಡ ಅಪ್ಪಣ್ಣ ಅವರ ಅಭಿಪ್ರಾಯದಂತೆ ಕೊಡವ ಮಕ್ಕಡ ಕೂಟದ ಸಹಕಾರದೊಂದಿಗೆ ಪುಸ್ತಕ ರೂಪದಲ್ಲಿ ಹೊರತರಲಾಗಿದೆ ಎಂದು ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಸ್ಥಾಪಕ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಕೊಡವ ಮಕ್ಕಡ ಕೂಟ ಪ್ರಕಟಿಸಿರುವ ೭೬ ಪುಸ್ತಕಗಳಲ್ಲಿ ಐದು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಚಿಗುರೆಲೆಗಳು ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ, ಅಗ್ನಿಯಾತ್ರೆ ಪುಸ್ತಕಕ್ಕೆ ಗೌರಮ್ಮ ದತ್ತಿ ನಿಧಿ ಪ್ರಶಸ್ತಿ ಲಭಿಸಿದೆ. ನಾಲ್ಕು ಪುಸ್ತಕಗಳು ಕೊಡವ ಸಿನಿಮಾವಾಗಿದೆ. ೧೯೬೫ರ ಯುದ್ಧ ಹಾಗೂ ಕೊಡಗಿನ ಮಹಾವೀರ ಸ್ಕ್ವಾ.ಲೀ ಅಜ್ಜಮಾಡ ದೇವಯ್ಯ ಅವರ ಜೀವನಾಧಾರಿತ ಪುಸ್ತಕ ಬಾಲಿವುಡ್ ಸಿನಿಮಾವಾಗಿ ತೆರೆ ಮೇಲೆ ಬರಲು ಸಿದ್ಧತೆ ನಡೆಸಿದೆ ಎಂದರು.


ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಐಚಂಡ ಶಾಂತಿ ಪೂಣಚ್ಚ ಉಪಸ್ಥಿತರಿದ್ದರು.