ಕೊಪ್ಪಳ: ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಒತ್ತಾಯಿಸಿ ರಾಯಚೂರು ಏಮ್ಸ್ ಪರ ಹೋರಾಟ ಸಮಿತಿ ಪದಾಧಿಕಾರಿಗಳು ಮಂಗಳವಾರ ಎಸಿ ಕ್ಯಾ.ಮಹೇಶ ಮಾಲಗಿತ್ತಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕಲ್ಯಾಣ ಕರ್ನಾಟಕ ಭಾಗ ಆರೋಗ್ಯ ರಂಗ ಸೇರಿ ಇತರ ರಂಗಗಳಲ್ಲಿ ಹಿಂದುಳಿದಿದೆ. ಅಭಿವೃದ್ಧಿ ದೃಷ್ಟಿಯಿಂದ ಏಮ್ಸ್ ಮಂಜೂರು ಮಾಡಬೇಕು. ಈಗಾಗಲೇ ರಾಜ್ಯ ಸರ್ಕಾರ ರಾಯಚೂರಿನಲ್ಲಿ ಏಮ್ಸ್ ನಿರ್ಮಿಸುವುದಾಗಿ ತಿಳಿಸಿದೆ. ಕೇಂದ್ರಕ್ಕೂ ಪತ್ರ ಬರೆದು ಮನವಿ ಮಾಡಿದೆ. ಆದರೆ, ಕೇಂದ್ರ ಸರ್ಕಾರ ಅನುಮೋದನೆ ನೀಡುತ್ತಿಲ್ಲವೆಂದು ದೂರಿದರು.
ಈ ಸಂಬಂಧ ಕಳೆದ ಎರಡು ವರ್ಷದಿಂದ ನಿರಂತರ ಹೋರಾಟ ನಡೆದಿದೆ. ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ರಾಜ್ಯ, ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದೆ. ಹೀಗಿದ್ದರೂ ಕೇಂದ್ರ ಮೌನ ಮುರಿಯುತ್ತಿಲ್ಲ. ತಕ್ಷಣ ಏಮ್ಸ್ಗೆ ಅನುಮೋದನೆ ನೀಡಬೇಕು. ಕಕ ಭಾಗದ ಆರೋಗ್ಯ ಕ್ಷೇತ್ರ ಅಭಿವೃದ್ಧಿಗೆ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಹೋರಾಟ ಸಮಿತಿ ಸಂಚಾಲಕರಾದ ರಮೇಶ ತುಪ್ಪದ, ಸಂತೋಷ ದೇಶಪಾಂಡೆ, ಶಿವಕುಮಾರ ಕುಕನೂರ, ಶರಣು ಡೊಳ್ಳಿನ, ಸೋಮನಗೌಡ, ಸುಧಾಕರ ಮುಜಗೊಂಡ, ನಿತೀಶ ಪುಲಸ್ಕರ, ಜಗದೀಶ ಗುತ್ತಿ, ರಾಜಶೇಖರ ಶ್ಯಾಗೋಟಿ ಇತರರಿದ್ದರು.