BASAVARAJA KALASA 
ಜಿಲ್ಲೆ

ಏಮ್ಸ್ ಹೋರಾಟಕ್ಕೆ ಮೇ 13 ಕ್ಕೆ ನಾಲ್ಕು ವರ್ಷ *ಸರ್ವ ಪಕ್ಷಗಳ ನಿಯೋಗ ದೆಹಲಿಗೆ ತೆರಳಲು ಹೋರಾಟಗಾರರ ಒತ್ತಾಯ

ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿ ಕಳೆದ ಮೂರು ವರ್ಷಗಳಿಂದ ಹೋರಾಟ ಮಾಡಲಾಗುತ್ತಿದ್ದು, ಮೇ 13 ರಂದು ಹೋರಾಟ ನಾಲ್ಕನೇ ವರ್ಷಕ್ಕೆ ಕಾಲಿಡುತ್ತಿದ್ದು, ರಾಜ್ಯ ಸರ್ಕಾರ ಕೂಡಲೇ ಸರ್ವ ಪಕ್ಷಗಳ ನಿಯೋಗದೊಂದಿಗೆ ದೆಹಲಿಗೆ ತೆರಳಿ ಏಮ್ಸ್ ಮಂಜೂರು ಮಾಡಿಸಲು ಮುಂದಾಗಬೇಕೆಂದು ಹೋರಾಟ ಸಮಿತಿ ಪ್ರಧಾನ ಸಂಚಾಲಕ ಡಾ.ಬಸವರಾಜ ಕಳಸ ಹೇಳಿದರು.\

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಏಮ್ಸ್ ಮಂಜೂರು ಮಾಡಲು ಒತ್ತಾಯಿಸಿ 2022ರ ಮೇ 13ರಂದು ಏಮ್ಸ್ ಹೋರಾಟ ಸಮಿತಿಯಿಂದ ಹೋರಾಟ ಪ್ರಾರಂಭವಾಗಿದ್ದು, ಮೇ 13 ರಂದು ನಾಲ್ಕನೇ ವರ್ಷಕ್ಕೆ ಮುಂದುವರೆಯುತ್ತಿದೆ. ಆದರೆ ಕೇಂದ್ರ ಮಟ್ಟದಲ್ಲಿ ಯಾವುದೇ ಬೆಳವಣಿಗೆ ಕಾಣುತ್ತಿಲ್ಲ ಎಂದರು.

ಏಮ್ಸ್ ಹೋರಾಟ ಸಮಿತಿಯಿಂದ ನಿರಂತರವಾಗಿ ಕಲ್ಯಾಣ ಕರ್ನಾಟಕ ಭಾಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ರಾಯಚೂರಿನಲ್ಲಿಯೇ ಎಮ್ಸ್ ಸ್ಥಾಪನೆ ಮಾಡಬೇಕೆಂಬ ಒತ್ತಾಯದೊಂದಿಗೆ ಶಿಸ್ತುಬದ್ದವಾಗಿ ಹಾಗೂ ಕಾನೂನು ನಿಯಮಗಳನ್ನು ಪಾಲಿಸುತ್ತಾ ಸಾಕಷ್ಟು ಪ್ರತಿಭಟನೆಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಮ್ಸ್‌ಗಾಗಿ ಕೇಂದ್ರಕ್ಕೆ ಪತ್ರಬರೆದಿದ್ದು, ಬಿಟ್ಟರೇ ಸರ್ಕಾರದ ಮಟ್ಟದಲ್ಲಿ ಯಾವುದೇ ಕೆಲಸಗಳು ಆಗಿಲ್ಲ. ಕೂಡಲೇ ರಾಜ್ಯ ಸರ್ಕಾರ ಸಂಪುಟಸಭೆಯಲ್ಲಿ ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪನೆಯಾಗಬೇಕೆಂಬ ನಿರ್ಧಾರವನ್ನು ಕೈಗೊಂಡು ದೆಹಲಿಗೆ ಸರ್ವಪಕ್ಷಗಳ ನಿಯೋಗ ತೆರಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ಅಶೋಕ ಕುಮಾರ ಜೈನ್, ಜಾನ್ ವೆಸ್ಲಿ, ವೀರಭದ್ರಯ್ಯ ಸ್ವಾಮಿ, ಗುರುರಾಜ ಕುಲಕರ್ಣಿ, ಜಗದೀಶ ಇದ್ದರು.