ಜಿಲ್ಲೆ

ಏಮ್ಸ್ ಬಗ್ಗೆ ಪ್ರಧಾನಿಯೊಂದಿಗೆ ಚರ್ಚೆ

ರಾಯಚೂರು: ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವಂತೆ ಒತ್ತಾಯಿಸಿ ಏಮ್ಸ್ ಹೋರಾಟ ಸಮಿತಿ ನಿಯೋಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಅವರನ್ನು ಭಾನುವಾರ ಒತ್ತಾಯಿಸಿತು.

ಕೊಪ್ಪಳ ಜಿಲ್ಲೆ ಗಂಗಾವತಿಗೆ ಆಗಮಿಸಿದ್ದ ಬಿ.ಎಲ್.ಸಂತೋಷ ಅವರನ್ನು ಭೇಟಿಯಾದ ನಿಯೋಗ, ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸುವ ಅಗತ್ಯ ಮತ್ತು 320ಕ್ಕೂ ಹೆಚ್ಚು ದಿನಗಳಿಂದ ನಡೆಯುತ್ತಿರುವ ಹೋರಾಟದ ಬಗ್ಗೆ ಮಾಹಿತಿ ನೀಡಿ, ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವಂತೆ ಕೋರಿದರು.

ಮನವಿ ಸ್ವೀಕರಿಸಿ ಮಾತನಾಡಿದ ಬಿ.ಎಲ್.ಸಂತೋಷ, ಏಮ್ಸ್‌ಗಾಗಿ ನಡೆಯುತ್ತಿರುವ ಹೋರಾಟ ಗಮನಕ್ಕಿದ್ದು, ಶೀಘ್ರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸಲಾಗುವುದು. ಆಮರಣಾಂತರ ಉಪವಾಸದಂತಹ ನಿರ್ಧಾರ ಕೈಗೊಳ್ಳುವುದು ಬೇಡ ಎಂದು ಸಲಹೆ ನೀಡಿದರು. ಬಳಗಾನೂರಿನ ಸಿದ್ಧಬಸವ ಸ್ವಾಮೀಜಿ, ಕಲ್ಲೂರಿನ ಅಡವೇಶ್ವರ ಸ್ವಾಮೀಜಿ ಇತರರಿದ್ದರು.