ಜಿಲ್ಲೆ

ರೈಲ್ವೆ ಸಮಗ್ರ ಅಭಿವೃದ್ಧಿಗೊಳಿಸಿ

Kopala - Raveendra V K

ಕೊಪ್ಪಳ: ರೈಲ್ವೆ ವಲಯ ದುರ್ಬಲಗೊಳಿಸದೇ ಸಪರ್ಮಕವಾಗಿ ಅಭಿವೃದ್ಧಿಗೊಳಿಸಬೇಕೆಂದು ಒತ್ತಾಯಿಸಿ ಎಐಟಿವೈಒ ಪದಾಧಿಕಾರಿಗಳು ಗುರುವಾರ ನಗರ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.

ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ್​ ಮಾತನಾಡಿ, ದೇಶದ ಅತಿದೊಡ್ಡ ಸಾರ್ವಜನಿಕ ವಲಯವಾಗಿರುವ ರೈಲ್ವೆ ಕ್ರಮೇಣ ದುರ್ಬಲವಾಗುತ್ತಿದೆ. ಜನರ ಹಣದಿಂದ ಇಲಾಖೆ ಸದೃಢ ಮಾಡಿದ್ದಾರೆ. ಈಗ ಖಾಸಗೀಕರಣಗೊಳಿಸಿ ದುರ್ಬಲ ಮಾಡಲಾಗುತ್ತಿದೆ. ಸುರಕ್ಷತೆ ಮರೆಯಾಗಿದೆ. ಸಿಬ್ಬಂದಿ ಕೊರತೆ ಬಹುವಾಗಿ ಕಾಡುತ್ತಿದೆ. ಶುಚಿತ್ವ, ನಿರ್ವಹಣೆ, ಭದ್ರತೆ ಸೇರಿ ಕೆಲ ವಿಭಾಗಗಳನ್ನು ಈಗಾಗಲೇ ಖಾಸಗಿಕರಣಗೊಳಿಸಿದ್ದಾರೆ. ಅಪಘಾತಗಳು ಹೆಚ್ಚುತ್ತಿವೆ. ಲೋಕೋ ಪೈಲಟ್​ಗಳ ಕೊರತೆ ಇದೆ ಎಂದರು.

ರಾಜ್ಯ ಮುಖಂಡ ಶರಣು ಗಡ್ಡಿ ಮಾತನಾಡಿ, ನಿರುದ್ಯೋಗದಿಂದ ದೇಶದ ಅಭಿವೃದ್ಧಿ ಕುಂಠಿತವಾಗುತ್ತಿದೆ. ರೈಲಿನಲ್ಲಿ ಜನದಟ್ಟಣೆ ಹೆಚ್ಚುತ್ತಿದ್ದು ನಿರ್ವಹಣೆಗೆ ಕ್ರಮವಾಗಬೇಕು. ಕಾಯ್ದರಿಸಿದ ಬೋಗಿ ಹೆಚ್ಚಿಸುವ ಬದಲು ಸಾಮಾನ್ಯ ಬೋಗಿಗಳನ್ನು ಹೆಚ್ಚಿಸಬೇಕಿದೆ. ಕೋವಿಡ್​ನಲ್ಲಿ ರದ್ದಾದ ಸೇವೆಗಳನ್ನು ಮರು ಆರಂಭಿಸಬೇಕು. ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಮೂಲ ಸೌಕರ್ಯ ಒದಗಿಸಬೇಕು. ಗಿಣಿಗೇರಾ&ಮೆಹಬೂಬ ನಗರ ರೈಲ್ವೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ ಎಂದು ಒತ್ತಾಯಿಸಿದರು. ಪ್ರತಿಭಟನೆ ಬಳಿಕ ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪದಾಧಿಕಾರಿಗಳಾದ ಸುಭಾನ್​, ಪ್ರದಿಪ್​, ರಮೇಶ್​, ಪ್ರಶಾಂತ್​, ಮಾಬು ಸಾಬ್​, ಹರ್ಷವರ್ದನ, ರವಿ, ಪ್ರೇಮನಾಥ್​ ಇತರರಿದ್ದರು.