ಹಾಸನ: ಹಾಸನ ವಿಶ್ವ ವಿಶ್ವವಿದ್ಯಾಲಯ ಇಲ್ಲಿಯೇ ಉಳಿಸಬೇಕು ಎಂದು ಆಗ್ರಹಿಸಿ ನಗರದ ಹೇಮಾವತಿ ಪ್ರತಿಮೆ ಮುಂಭಾಗ ಗುರುವಾರ ನೂರಾರು ಸಂಖ್ಯೆಯಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಎಐಡಿಎಸ್‌ಒ ನೇತೃತ್ವದಲಿ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿ ಸಂಘಟನೆಯ ರಾಜ್ಯ ಖಜಾಂಚಿ ಸುಭಾಷ್ ಮಾತನಾಡಿ, ಹಾಸನ ವಿಶ್ವವಿದ್ಯಾನಿಲಯವನ್ನು ಇಲ್ಲಿಯೇ ಉಳಿಸಬೇಕು. 30,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 56ಕ್ಕೂ ಹೆಚ್ಚು ಕಾಲೇಜುಗಳು ವಿಶ್ವವಿದ್ಯಾನಿಲಯದ ಕೆಳಗಡೆ ಬರುತ್ತವೆ. 30 ವರ್ಷಗಳ ಹಿಂದೆ ಹೇಮಾ ಗಂಗೋತ್ರಿ ಹೆಸರಿನಲ್ಲಿ ಸ್ನಾತಕೋತ್ತರ ಕೇಂದ್ರ ಪ್ರಾರಂಭವಾಗಿದ್ದು, ಸಾವಿರಾರು ವಿದ್ಯಾರ್ಥಿಗಳು ಓದಿ ವಿದ್ಯಾವಂತರಾಗಿದ್ದಾರೆ. ಇಂತಹ ಇತಿಹಾಸ ಹೊಂದಿರುವ ಶಿಕ್ಷಣ ಸಂಸ್ಥೆಯನ್ನು ಉಳಿಸಿಕೊಳ್ಳಬೇಕು. ಹಾಸನ ವಿಶ್ವವಿದ್ಯಾನಿಲಯವನ್ನು ಕೇವಲ ಉಳಿಸುವುದು ಮಾತ್ರವಲ್ಲ, ಅದನ್ನು ಅಭಿವೃದ್ಧಿಪಡಿಸಲು ಸರ್ಕಾರ ಹೆಚ್ಚಿನ ಅನುದಾನವನ್ನು ಈ ಕೂಡಲೇ ಬಿಡುಗಡೆ ಮಾಡಬೇಕು. ಅಗತ್ಯ ಮೂಲಭೂತ ಸೌಕರ್ಯಗಳನ್ನು ಕೊಡಬೇಕು. ಬೋಧಕ ಹಾಗೂ ಬೋಧಕ್ಕೆತರ ಸಿಬ್ಬಂದಿಯನ್ನು ಈ ಕೂಡಲೇ ನೇಮಿಸಬೇಕು ಎಂದು ಆಗ್ರಹಿಸಿದರು.
ವಿಶ್ವವಿದ್ಯಾಲಯಗಳು ಜ್ಞಾನವೃದ್ಧಿಯ ಪೀಠಗಳು ಎಂಬ ಮೂಲ ಪರಿಕಲ್ಪನೆಯನ್ನೇ ಗಾಳಿಗೆ ತೂರಿ ಹಿಂದಿನ ಬಿಜೆಪಿ ಸರ್ಕಾರವು ಜಿಲ್ಲೆಗೊಂದು ವಿಶ್ವವಿದ್ಯಾಲಯಗಳನ್ನು ಪ್ರಾರಂಭಿಸಿತು. ಯಾವುದೇ ಶಿಕ್ಷಣ ತಜ್ಞರ ಅಭಿಪ್ರಾಯಗಳನ್ನು ಕೇಳದೆ, ಅಪ್ರಜಾತಾಂತ್ರಿಕವಾಗಿ ಈ ವಿಶ್ವವಿದ್ಯಾಲಯಗಳನ್ನು ಪ್ರಾರಂಭಿಸಲಾಯಿತು. ನೃಪತುಂಗ, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಎಂಬ ಪಟ್ಟ ಕಟ್ಟಿ, ಇವುಗಳನ್ನು ಸ್ವಯಂ ಹಣಕಾಸು ಸಂಸ್ಥೆಗಳನ್ನಾಗಿ ಮಾಡಿ ಮೂರು ಪಟ್ಟು ಶುಲ್ಕವನ್ನು ಹೆಚ್ಚಿಸಲಾಗಿತ್ತು. ಈ ಕುರಿತಾಗಿಯೂ ಎಐಡಿಎಸ್‌ಒ ಅನೇಕ ಬಾರಿ ಪ್ರತಿರೋಧ ವ್ಯಕ್ತಪಡಿಸಿತ್ತು. ಒಂದು ವಿಶ್ವವಿದ್ಯಾಲಯಕ್ಕೆ ತಲಾ 2 ಕೋಟಿ ರೂ. ಅನುದಾನವನ್ನು ಮಾತ್ರ ನಿಗದಿಪಡಿಸಲಾಯಿತು ಎಂದರು.
ಸರ್ಕಾರದ ಈ ಅವೈಜ್ಞಾನಿಕ ನಡೆಯನ್ನು ಎಐಡಿಎಒ ಪ್ರಶ್ನಿಸಿತ್ತು. ಹಿಂದಿನ ಬಿಜೆಪಿ ಸರ್ಕಾರದ ರೀತಿಯಲ್ಲೇ ಕಾಂಗ್ರೆಸ್ ಸರ್ಕಾರವು ಎಲ್ಲ ಪ್ರಜಾತಾಂತ್ರಿಕ ಪ್ರಕ್ರಿಯೆಗಳನ್ನು ಗಾಳಿಗೆ ತೂರಿ ಕೇವಲ ತನ್ನ ಸಂಪುಟ ಸಭೆಯ ಉಪಸಮಿತಿಯ ಮೂಲಕ 9 ವಿಶ್ವವಿದ್ಯಾಲಯಗಳನ್ನು ಮುಚ್ಚುವ ನಿರ್ಧಾರವನ್ನು ಕೈಗೊಂಡಿದೆ. ಇದರಲ್ಲಿ ಹಾಸನ ವಿಶ್ವವಿದ್ಯಾಲಯವು ಕೂಡ ಒಂದು. ಸರ್ಕಾರದ ಈ ನಡೆಯನ್ನು ಎಐಡಿಎಸ್‌ಒ ಉಗ್ರವಾಗಿ ಖಂಡಿಸುತ್ತದೆ. ಮುಚ್ಚಲ್ಪಡುತ್ತಿರುವ ಹಾಸನ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು, ಬೋಧಕರು ಹಾಗೂ ಇತರೆ ಸಿಬ್ಬಂದಿ ಹೊಣೆ ಯಾರದ್ದು ಎಂದು ಪ್ರಶ್ನೆ ಮಾಡಿದರುಪ್ರಶ್ನೆಯನ್ನು ಸರ್ಕಾರದ ಮುಂದಿಡುತ್ತಿದೆ.
ಹಾಸನದ ಜನಪ್ರತಿನಿಧಿಗಳು, ಪ್ರಗತಿಪರರು, ಸಾಹಿತಿಗಳು, ಶಿಕ್ಷಣತಜ್ಞರು ಈ ಕೂಡಲೇ ವಿಶ್ವವಿದ್ಯಾನಿಲಯವನ್ನು ಉಳಿಸಲು ಬೆಳೆಸಲು ಮುಂದೆ ಬರಬೇಕು. ಶಿಕ್ಷಣ ಕ್ಷೇತ್ರದ ಯಾವುದೇ ನಿರ್ಧಾರವನ್ನು ಏಕಪಕ್ಷೀಯವಾಗಿ ಕೈಗೊಳ್ಳದೆ, ಬೋಧಕರು, ಪಾಲಕರು, ವಿದ್ಯಾರ್ಥಿಗಳು, ಶಿಕ್ಷಣ ತಜ್ಞರನ್ನೊಳಗೊಂಡ ಪ್ರಜಾತಾಂತ್ರಿಕ ಪ್ರಕ್ರಿಯೆಯನ್ನು ಅನುಸರಿಸುವಂತೆ ಸರ್ಕಾರವನ್ನು ಆಗ್ರಹಿಸುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಚಂದ್ರಕಲಾ, ಜಿಲ್ಲಾ ಸಂಚಾಲಕಿ ಚೈತ್ರಾ, ಕಾರ್ಯಕರ್ತರಾದ ಶಾಮಲಾ, ಧನುಶ್ರೀ, ನಾಗಶ್ರೀ, ಸಾಕೆತ್ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.